ಸಂಪನ್ಮೂಲ ಬಳಸಿ ಕೈಗಾರಿಕೆ ಸ್ಥಾಪಿಸಿ:ನಿರಾಣಿ

ಕಲಬುರಗಿ,ಜ.7: ಜಿಲ್ಲೆಯಲ್ಲಿ ಸುಮಾರು 51 ಲಕ್ಷ ಟನ್ ಸುಣ್ಣದ ಕಲ್ಲಿನ ಸಂಪನ್ಮೂಲ ಹೇರಳವಾಗಿದ್ದು, ಇದನ್ನು ಬಳಸಿಕೊಂಡು ಸ್ಥಳೀಯರೇ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ನೀಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ(ಡಿ) ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 30 ಗುಂಟೆ ವಿಸ್ತೀರ್ಣದಲ್ಲಿ 2 ಕೋಟಿ ರೂ. ವೆಚ್ಚದಡಿ ನಿರ್ಮಿಸಲಾಗಿರುವ ಖನಿಜ ಭವನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 500 ಕೋಟಿ ರೂ. ಹೆಚ್ಚಿನ ಹೂಡಿಕೆಯ ಕೈಗಾರಿಕೆ ಸ್ಥಾಪನೆಗೆ ಹೈ ಪವರ್ ಕಮಿಟಿ ಅನುಮತಿ ನೀಡಲಾಗುತ್ತದೆ. ಅಲ್ಲಿ 100 ಉದ್ಯಮಿದಾರರಲ್ಲಿ 99 ಅನ್ಯ ರಾಜ್ಯದವರಿದ್ದು, ಒಬ್ಬರು ಮಾತ್ರ ರಾಜ್ಯದವರು ಸಿಗ್ತಾರೆ. ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಸಬ್ಸಿಡಿ ನೀಡುವುದಲ್ಲದೆ ಸಿಂಗಲ್ ವಿಂಡೋ ಮೂಲಕ ತ್ವರಿತ ಅನುಮತಿ ನೀಡಲಾಗುತ್ತಿದೆ ಎಂದರು.
ಹಿಂದೆ ಗಣಿ ಸಚಿನಾಗಿದ್ದಾಗ ರಾಜ್ಯದಲ್ಲಿ ಮೈನಿಂಗ್ ಶಾಲೆ ತೆರೆಯಲು ಚಿಂತನೆ ನಡೆಸಿದ್ದೆ. ಗಣಿ ಅಧಿಕಾರಿ-ಸಿಬ್ಬಂದಿಗಳಿಗೆ ಪೆÇಲೀಸ್ ರೀತಿಯಲ್ಲಿ ವಾಹನ, ಸಮವಸ್ತ್ರ ನೀಡುವ ಅವಶ್ಯಕತೆ ಇದೆ ಎಂದರು.
ಗುಣಮಟ್ಟ ಕಾಯ್ದುಕೊಳ್ಳಿ:
ಕೆ.ಆರ್.ಐ.ಡಿ.ಎಲ್ ನಿಗಮದಿಂದ ಖನಿಜ ಭವನನಿರ್ಮಾಣ ಮಾಡಿದ್ದನ್ನು ಅರಿತ ಸಚಿವರು, ಲ್ಯಾಂಡ್ ಆರ್ಮಿ ಇಲಾಖೆ ಗುಣಮಟ್ಟ ಕಟ್ಟಡ ನಿರ್ಮಾಣ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಲ್ಲೆ ಇದ್ದ ಇಂಜಿನೀಯರ್ ಗೆ ಖಡಕ್ ಸೂಚನೆ ನೀಡಿದರು.
19ಕ್ಕೆ ಪ್ರಧಾನಮಂತ್ರಿ ಕಲಬುರಗಿಗೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ದಕ್ಷಿಣ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ ಡಾ.ಮುರುಗೇಶ ನಿರಾಣಿ ಅವರು ಹಿಂದೆ ಗಣಿ ಸಚಿವರಾಗಿದ್ದಾಗ ಪ್ರತಿಫಲ ಈ ಖನಿಜ ಭವನ ಇಂದು ತಲೆ ಎತ್ತಿದೆ. ನನ್ನ ಕ್ಷೇತ್ರದಲ್ಕಿ ಸ್ಲಂ ಬೋರ್ಡ್ ನಿಂದ 3 ಸಾವಿರ ಮನೆ ನಿರ್ಮಿಸುತ್ತಿದ್ದು, ಕ್ರಶ್ ಉದ್ಯಮಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಘಟಕ ನಿಲ್ಲಿಸಿದ್ದರಿಂದ ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೆ ಇವರ ಸಮಸ್ಯೆ ಬಗೆಹರಿಸಬೇಕು. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೂ ಸಚಿವರು ಅನುಮತಿ ನೀಡಿದ್ದಾರೆ.ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ಇದೇ ಜ.19ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಲಬುರಗಿಗೆ ಆಗಮಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಕಲಬುರಗಿ ನೀರಾವರಿ ಯೋಜನೆಗಳ ವಲಯದ (ಕಾಡಾ) ಅಧ್ಯಕ್ಷ ಹರ್ಷವರ್ಧನ ಗುಗಳೆ, ನಂದಿಕೂರ ಗ್ರಾಪಂ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಸುಮಿತ್ರಾದೇವಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.