
ಬಾಳೆಹೊನ್ನೂರು.ಸೆ.೮; ಜೀವನದಲ್ಲಿ ಬಹಳಷ್ಟು ಜನ ಹಣವೇ ಮುಖ್ಯವೆಂದು ತಿಳಿದವರುಂಟು. ಹಣದೊಂದಿಗೆ ಗುಣವು ಮುಖ್ಯವೆಂಬುದನ್ನು ಮರೆಯಬಾರದು. ಸಂಪತ್ತಿನಿಂದ ಸೌಲಭ್ಯ ಪಡೆಯಬಹುಯದೇ ವಿನಾ ಸತ್ಯ ಸಂಸ್ಕೃತಿ ಕೊಳ್ಳಲಾಗದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಪುರಾಣ ಪ್ರವಚನ ಹಾಗೂ ಎಡೆಯೂರು ರೇಣುಕ ಶ್ರೀಗಳವರ 76ನೇ ಜನ್ಮ ವರ್ಧಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಹಣವಿಲ್ಲದಲೇ ದೈನಂದಿನ ಜೀವನ ನಡೆಯದು. ಆದರೂ ಜೀವನ ನಿರ್ವಹಣೆಗೆ ಹಣ ಬೇಕು. ಹಣದಿಂದ ಔಷಧಿ ಕೊಳ್ಳಬಹುದು. ಆದರೆ ಆರೋಗ್ಯ ಭಾಗ್ಯ ಕೊಳ್ಳಲಾಗದು. ಹಣದಿಂದ ಆಹಾರ ಪದಾರ್ಥ ಕೊಳ್ಳಬಹುದು. ಆದರೆ ಪಚನ ಶಕ್ತಿ ಕೊಳ್ಳಲಾಗದು. ಹಣದಿಂದ ಹಾಸಿಗೆ ಕೊಂಡರೂ ನಿದ್ದೆ ಕೊಳ್ಳಲಾಗದು. ಹಣದಿಂದ ಪುಸ್ತಕ ಪತ್ರಿಕೆೆ ಕೊಳ್ಳಬಹುದು. ಆದರೆ ಅವುಗಳನ್ನು ಓದದೇ ಜ್ಞಾನ ಪಡೆಯಲಾಗದು. ಹಣದಿಂದ ಮನೆ ವಾಹನ ಕೊಳ್ಳಬಹುದು. ಆದರೆ ಮನದ ಶಾಂತಿ ನೆಮ್ಮದಿ ಕೊಳ್ಳಲಾಗದು. ಸಂಪತ್ತಿನಿAದ ಮನುಷ್ಯ ವಸ್ತು ಕೊಳ್ಳಬಹುದು. ಆದರೆ ಸತ್ಯ ಸಂಸ್ಕೃತಿ ಕೊಳ್ಳಲಾಗದು. ಕಸ್ತೂರಿ ಮೃಗದ ನಾಭಿಯಿಂದ ಸುಗಂಧ ಸೂಸುತ್ತಿದ್ದರೂ ಅರಿಯದೇ ವನವೆಲ್ಲ ಸುತ್ತಿ ಬಳಲಿದಂತೆ ಮನುಷ್ಯ ತನ್ನಂತರAಗದಲ್ಲಿರುವ ದೇವರನ್ನು ಕಾಣದೇ ಪರಿತಪಿಸುತ್ತಿದ್ದಾನೆ. ಪರಮ ಗುರುವಿನ ಅನುಗ್ರಹ ಸಂಸ್ಕಾರ ಇಲ್ಲದಿದ್ದರೆ ಜೀವನ ಉಜ್ವಲಗೊಳ್ಳದು. ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರ ಸ್ಥಾನವಿದೆ. ಜೀವನ ವಿಕಾಸಕ್ಕೆ ಗುರುವೇ ಮೂಲ. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳವರ 76ನೇ ವರ್ಷದ ಜನ್ಮ ದಿನೋತ್ಸವ ಇಂದೇ ಬಂದಿರುವುದು ಯೋಗಾಯೋಗ. ಶ್ರೀ ರಂಭಾಪುರಿ ಪೀಠದ ಜಗದ್ಗುರು ತ್ರಯರ ಸೇವೆ ಸಲ್ಲಿಸಿದ ಸೌಭಾಗ್ಯ ಅವರದು ಅವರ ಕ್ರಿಯಾಶೀಲ ಬದುಕನ್ನು ಕಂಡು ಅವರಿಗೆ “ಚೈತನ್ಯ ಚಿಲುಮೆ” ಪ್ರಶಸ್ತಿಯಿತ್ತು ರೇಶ್ಮೆ ಮಡಿ ಫಲ ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಇದು ನಮ್ಮ ಜೀವನದ ಸೌಭಾಗ್ಯದ ಸುದಿನ. ಪ್ರತಿ ವರುಷ ಆಚರಿಸುವ ಜನ್ಮ ವರ್ಧಂತಿ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಯಾವಾಗಲೂ ಇದೆ. 76ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿದ ಪರ್ವ ಕಾಲದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಂತ:ಕರಣದ ಆಶೀರ್ವಾದ ನಮಗೆ ಇನ್ನಷ್ಟು ಶಕ್ತಿ ತಂದು ಕೊಟ್ಟಿದೆ. ಅನುದಿನವೂ ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಂದೇಶದ ಅರಿವನ್ನು ಮೂಡಿಸುವ ಕಾರ್ಯ ನಮ್ಮದಾಗಿದೆ. ಕೈ ಕಾಲುಗಳಲ್ಲಿ ಶಕ್ತಿಯಿರುವತನಕ ಶ್ರೀ ಪೀಠದ ಮತ್ತು ಸಮಾಜದ ಸೇವೆ ಮಾಡುವಂಥ ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸುತ್ತೇವೆ ಎಂದರು. ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡು ಸಮಯೋಚಿತ ನುಡಿ ನಮನ ಸಲ್ಲಿಸಿದರು. ಶಿಕ್ಷಕ ವೀರೇಶ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು.