ಸಂತ ಸೇವಾಲಾಲ್‍ರು ಶ್ರೇಷ್ಠ ಸಮಾಜ ಸುಧಾರಕ

ಕಲಬುರಗಿ:ಫೆ.15: ನಮ್ಮ ದೇಶದಲ್ಲಿ ಅನೇಕ ಮಹನೀಯರು ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ವೀರರಾಗಿ, ತ್ಯಾಗಮಯಿಯಾಗಿ, ಸಾಂಸ್ಕøತಿಕ ನಾಯಕರಾಗಿ, ಬಂಜಾರ ಸಮುದಾಯದ ರಕ್ಷಕರಾಗಿ, ಜನತೆಯ ಅಜ್ಞಾನ, ಅಂಧಕಾರ, ಅಸಮಾನತೆ, ಜಾತಿಪದ್ಧತಿ ನಿರ್ಮೂಲನೆ ಸೇರಿದಂತೆ ವಿವಿಧ ಮುಖಗಳಲ್ಲಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸಿದ ಸಂತ ಸೇವಾಲಾಲ್‍ರು ಶ್ರೇಷ್ಠ ಸಮಾಜ ಸುಧಾರಕರಾಗಿದ್ದಾರೆಂದು ಪ್ರಾಂಶುಪಾಲ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ‘ಸಂತ ಸೇವಾಲಾಲ್‍ರ 285ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಸಂತ ಸೇವಾಲಾಲ್‍ರು ಸಮಾಜದಲ್ಲಿದ್ದ ಬಡವರು, ವೃದ್ಧರು, ಅನಾಥರು, ಅನಾರೋಗ್ಯ ಪೀಡಿತರ ಸೇವೆಯನ್ನು ಮಾಡುವ ಮೂಲಕ ಅವರಲ್ಲಿ ದೇವರನ್ನು ಕಂಡವರು. ಶಿಕ್ಷಣದಿಂದಲೇ ಸಮುದಾಯ ಪ್ರಗತಿ ಕಾಣಲು ಸಾಧ್ಯವಿದೆಯೆಂದು ಎಲ್ಲೆಡೆ ಜಾಗೃತಿ ಮೂಡಿಸಿದರು. ಸಮುದಾಯದ ಜನರು ಎಲ್ಲೆಡೆ ಸಂಚಾರ ಮಾಡುವುದನ್ನು ಬಿಟ್ಟು ಒಂದೆಡೆ ಶಾಶ್ವತವಾಗಿ ನೆಲೆನಿಂತು ವ್ಯವಸಾಯ, ಪಶುಪಾಲನೆ ಮಾಡಲು ತಿಳವಳಿಕೆ ನೀಡಿದರು. ಪ್ರಾಣಿಹಿಂಸೆ ಮಾಡಬಾರದೆಂದು ಹೇಳಿ, ಅನೇಕ ಪ್ರಾಣಿಗಳನ್ನು ರಕ್ಷಿಸುವುದು ಸೇರಿದಂತೆ ಮುಂತಾದ ಜನಪರ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಆಸ್ಮಾ ಜಬೀನ್, ನಯಿಮಾ ನಾಹಿದ್, ರೇಣುಕಾ ಚಿಕ್ಕಮೇಟಿ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಅತಿಥಿ ಉಪನ್ಯಾಸಕಿಯರಾದ ನಾಗಮ್ಮ ಹಾದಿಮನಿ, ನುಝಹತ್ ಪರ್ವಿನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.