ಸಂತ ಸಾಹಿತ್ಯದ ಸಮಗ್ರ ಅಧ್ಯಯನ ಅಗತ್ಯ

ಬಾದಾಮಿ,ಜು.29: ಸಂತ ಸಾಹಿತ್ಯ ಕುರಿತು ಈವರೆಗೂ ಅಧ್ಯಯನ ನಡೆದಿಲ್ಲ. ದೇಶದ ಧಾರ್ಮಿಕ, ಸಾಂಸ್ಕ್ರತಿಕ ಹಾಗೂ ಪರಪಂರೆಯನ್ನು ಸಂತ, ಅವಧೂತ, ಸೂಫಿಗಳ ತತ್ವಪದಗಳಲ್ಲಿ ಕಾಣಬಹುದು. ಸಂತ ಸಾಹಿತ್ಯ ಅಧ್ಯಯನ ಸಮಗ್ರವಾಗಿ ನಡೆಯಬೇಕು ಎಂದು ಹಿರಿಯ ಸಾಹಿತಿ ಕೆ.ಜಿ.ನಾಗರಾಜಪ್ಪ ಹೇಳಿದರು.
ಅವರು ಗುರುವಾರ ತಾಲೂಕಿನ ಶಿವಯೋಗ ಮಂದಿರ ಸಂಸ್ಥೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶಿವಯೋಗ ಮಂದಿರ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ ಸಂತ ಸಾಹಿತ್ಯ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನ, ಭಕ್ತಿ ಮತ್ತು ಕರ್ಮ ಮೂರು ವೈದಿಕ ಪರಂಪರೆಯಲ್ಲಿ ವ್ಯಕ್ತವಾಗಿದ್ದು, ಅವೈದಿಕರಲ್ಲೂ ಜ್ಞಾನ ಭಕ್ತಿ ಮತ್ತು ಕರ್ಮ ಅನ್ನುವುದು ಲೋಕಾತೀತವಾದದ್ದು, ಭಕ್ತ ಮತ್ತು ಭಗವಂತ ಆಧ್ಯಾತ್ಮದಲ್ಲಿ ಕೊಂಡಿಯಾಗಿದೆ. ಭಾರತೀಯ ಸಂತರ, ಸೂಫಿಗಳ ಸಂಸ್ಕ್ರತಿ, ಸಾಹಿತ್ಯ ಪರಂಪರೆ ಯಳಿಯುವ ಜತೆಗೆ ಬೆಳೆಸುವ ಚಟುವಟಿಕೆಗಳು ಸಾಹಿತ್ಯ ಕ್ಷೇತ್ರದಲ್ಲಿ ನಡೆಯಬೇಕು. ಎಂದರು.
ಕೇವಲ ಪ್ರಚಾರಯೋಗ ನಡೆಯುವ ಇಂದಿನ ದಿನಮಾನದಲ್ಲಿ ವಿಚಾರ ಮತ್ತು ಆಚಾರ ದೂರವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ವೈದಿಕ ಹಾಗೂ ಅವೈದಿಕ ಪರಂಪರೆ ಸುಮಾರು ವರ್ಷಗಳಿಂದಲೂ ರೈಲು ಹಳಿಯಂತಾಗಿದೆ. ಎಲ್ಲರೂ ಆತ್ಮ ವಿಮರ್ಷೆ ಮಾಡಿಕೊಳ್ಳುವ ಅಗತ್ಯವಿದೆ. ಸಾಹಿತ್ಯ ಧರ್ಮ ವಿದ್ಯಾರ್ಥಿಯಾಗಿ ಅವಲೋಕಿಸಿದ್ದು, ಶ್ರೀ ಸಾಮಾನ್ಯರ ಬದುಕಿಗೆ ಬೆಲೆ ಇಲ್ಲದಾಗಿದೆ. ದೇಶದ ಪ್ರಗತಿ ಕೇವಲ ಮುಖವಾಡವಾಗಿರುವುದು ದುರಂತ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ವಸಂತಕುಮಾರ್ ಮಾತನಾಡಿ ಮನುಷ್ಯನ ತೃಪ್ತಿ ಬದುಕು ಎಲ್ಲೂ ಸಿಗದು. ಅತೃಪ್ತ ಆತ್ಮಗಳಿಗೆ ಆತ್ಮ ತುಂಬುವುದೆ ಈ ಸಂತ ಸಾಹಿತ್ಯದ ಅಧ್ಯಯನ ಶಿಬಿರದ ಕಾರ್ಯವಾಗಿದೆ. ಮನೋಮಯ, ಅನ್ನಮಯೆ, ಯೋಗಮಯ, ಸಂಗೀತ, ಸಾಹಿತ್ಯಮಂತ್ರ, ವಿಜ್ಞಾನಮಯ ಹೀಗೆ ಘಣ, ದೃವ, ಅನಿಲ ಮತ್ತು ಪ್ಲಾಸ್ಮಾದಂತೆ ಬದುಕನ್ನು ಆತ್ಮ ತುಂಬಿದ ದೇಹವಾಗಿಸಲು ಅಕಾಡೆಮಿ ಶಿಬಿರ ಆಯೋಜಿಸಿದೆ ಎಂದರು. ಕಳೆದ ಎರಡುವರೆ ವರ್ಷದ ಅವಧಿಯಲ್ಲಿ ಅಕಾಡೆಮಿಯಿಂದ 21 ಕಮ್ಮಟಗಳನ್ನು ಆಯೋಜಿಸಿದೆ. 150 ಪುಸ್ತಕಗಳು ಪ್ರಕಟವಾಗಿದೆ. ಭಾಷಾ ಅನುವಾದ ಕಾರ್ಯವೂ ನಡೆದಿದೆ ಎಂದರು.
ಶಿವಯೋಗಮಂದಿರದ ಶ್ರೀ ಪ್ರಭುಲಿಂಗ ಸ್ವಾಮಿಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಮ್ಮಟದ ನಿರ್ದೇಶಕ ಡಾ. ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಚಂದಪ್ಪ ಕಟ್ಟಿಮನಿ, ಡಾ. ಎ ರಘುರಾಂ, ಡಾ ಶೀಲಾದಾಸ್, ರಿಜಿಸ್ಟ್ರಾರ್ ಕರಿಯಪ್ಪ ಎನ್ ಉಪಸ್ಥಿತರಿದ್ದರು. ಕರಿಯಪ್ಪ ಸ್ವಾಗತಿಸಿದರು. ಮಾರುತಿ ಕಟ್ಟಿಮನಿ ನಿರೂಪಿಸಿದರು. ಡಾ. ಎ.ರಘುರಾಂ ವಂದಿಸಿದರು.