ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಪುತ್ತೂರು, ಜೂ.೭- ಉತ್ತಮ ಪರಿಸರವು ಸ್ವಸ್ಥ ಸಮಾಜವನ್ನು ಸೃಷ್ಟಿಸುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದ ಎರಡನೆಯ ಅಲೆಯ ತೀವ್ರತೆಯ ಸಂದರ್ಭದಲ್ಲಿ ಮನುಷ್ಯನ ಉಸಿರಾಟಕ್ಕೆ ಆಮ್ಲಜನಕವು ಎಷ್ಟು ಅನಿವಾರ್ಯವೆಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಪರಿಸರ ಸಂರಕ್ಷಣೆಯನ್ನು ಕೈಗೊಳ್ಳುವ ಮೂಲಕ ಎಲ್ಲಾ ಜೀವಿಗಳಿಗೆ ಅತೀ ಅಗತ್ಯವಾದ ಮೂಲಭೂತ ಅವಶ್ಯಕತೆಗಳು ದೊರೆಯುವಂತಾಗಲಿ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗೂಗಲ್ ಮೀಟ್ ಮೂಲಕ ಆಯೋಜಿಸಲಾದ ವೆಬಿನಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವರ್ಷದ ವಿಶ್ವ ಪರಿಸರ ದಿನಾಚರಣೆಯನ್ನು ‘ಪರಿಸರ ಪುನಃಸ್ಥಾಪನೆ’ ಎಂಬ ವಿಷಯದೊಂದಿಗೆ ಆಚರಿಸಲಾಗುತ್ತದೆ. ಪ್ರಸ್ತುತ ಕೋವಿಡ್ ಮಾರ್ಗಸೂಚಿಯಿಂದಾಗಿ ಎನ್ನೆಸ್ಸೆಸ್ ಸ್ವಯಂಸೇವಕರು ಮನೆಯಲ್ಲಿಯೇ ಇದ್ದುಕೊಂಡು ವೆಬಿನಾರ್‌ನಲ್ಲಿ ಭಾಗವಹಿಸಿ, ತಮ್ಮ ಮನೆಯ ವಠಾರದಲ್ಲಿಯೇ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ಪ್ರಸನ್ನರೈ ಕೆ. ಮಾತನಾಡಿ, ಪ್ರಕೃತಿ ವಿಕೋಪಕ್ಕೆ ಮನುಷ್ಯನ ಅತಿಯಾದ ಹಸ್ತಕ್ಷೇಪವೇ ಕಾರಣ. ಮನುಷ್ಯನಲ್ಲಿರುವ ಆಧುನಿಕತೆಯ ವ್ಯಾಮೋಹವೂ ಪರಿಸರ ನಾಶಕ್ಕೆ ಕಾರಣವಾಗಿದೆ. ನಮ್ಮಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವಾರು ಚಳುವಳಿಗಳು ನಡೆದಿವೆ. ಚಿಪ್ಕೊ ಚಳುವಳಿ, ಅಪ್ಪಿಕೊ ಚಳುವಳಿ, ನರ್ಮದಾ ಬಚಾವೋ ಮೊದಲಾದವುಗಳು ಅತ್ಯಂತ ಪ್ರಾಮುಖ್ಯವಾದವುಗಳಾಗಿವೆ. ಪರಿಸರ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ, ಬೆಳೆಸುವ ದಿಸೆಯಲ್ಲಿ ಕಂಕಣಬದ್ದರಾಗೋಣ ಎಂದರು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ಕೋವಿಡ್ ನೋಡಲ್ ಅಧಿಕಾರಿ ಡಾ. ಶೇಷಪ್ಪ ಅಮೀನ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಜನರಲ್ಲಿ ಪರಿಸರ ಜಾಗೃತಿಯ ಕುರಿತು ಇರುವ ಕಾಳಜಿ ಕ್ಷೀಣಿಸುತ್ತಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಗೌರವ ಅತಿಥಿಗಳಾಗಿ ಭಾಗವಹಿಸಿದ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪ್ರೊ. ಹರಿಪ್ರಸಾದ್, ಎನ್ನೆಸ್ಸೆಸ್ ಸ್ವಯಂಸೇವಕರು ತಮಗೆ ಒದಗಿ ಬರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮೌಲ್ಯಯುತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ವೆಬಿನಾರ್‌ನಲ್ಲಿ ಭಾಗವಹಿಸಿದ ಎನ್ನೆಸ್ಸೆಸ್ ಅಧಿಕಾರಿಗಳು ಮತ್ತು ಸುಮಾರು ೧೫೦ರಷ್ಟು ಸ್ವಯಂಸೇವಕರು ತಮ್ಮ ಮನೆಯ ಆವರಣದಲ್ಲಿಯೇ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ದಿನಕರ್ ಅಂಚನ್ ಮತ್ತು ಶಶಿಪ್ರಭಾ ಬಿ. ಉಪಸ್ಥಿತರಿದ್ದು ಸಹಕರಿಸಿದರು. ಸ್ವಯಂಸೇವಕರಾದ ಸೃಜನಾ ಎಸ್. ಸ್ವಾಗತಿಸಿ, ಲವಿನ್ ಜೆ.ವಿ. ವಂದಿಸಿದರು. ಅಮಿತ್ ಅರಾನ್ಹಾ ಕಾರ್ಯಕ್ರಮ ನಿರೂಪಿಸಿದರು.