ಸಂತ್ರಸ್ಥ ಪರಿಹಾರ ಯೋಜನೆಯಡಿ 1,70,85,000 ರೂ.ಗಳ ಪರಿಹಾರ ವಿತರಣೆ

ಕಲಬುರಗಿ.ಏ.08:ಕ್ರಿಮಿನಲ್ ಪ್ರಕರಣಗಳಲ್ಲಿ ನೋಂದ ಸಂತ್ರಸ್ಥರಿಗೆ ಹಾಗೂ ಮೃತಪಟ್ಟ ಸಂತ್ರಸ್ಥರ ವಾರಸುದಾರರಿಗೆ ಪರಿಹಾರ ನೀಡಲು ಸಂತ್ರಸ್ಥ ಪರಿಹಾರ ಕಾನೂನು ಜಾರಿಯಲ್ಲಿದ್ದು, ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕಳೆದ 3 ತಿಂಗಳ ಅವಧಿಯಲ್ಲಿ ಒಟ್ಟು 50 ಪ್ರಕರಣಗಳಲ್ಲಿ 1,70,85,000 ರೂ.ಗಳ ಪರಿಹಾರವನ್ನು ಸಂತ್ರಸ್ಥರು ಹಾಗೂ ಮೃತ ಸಂತ್ರಸ್ಥರ ವಾರಸುದಾರರಿಗೆ ವಿತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ. ಸತೀಶಸಿಂಗ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಆರ್. ಶೆಟ್ಟರ್ ಅವರು ತಿಳಿಸಿದ್ದಾರೆ.

ಇದಲ್ಲದೇ ಹೊಸದಾಗಿ 16 ಪ್ರಕರಣಗಳಲ್ಲಿ 62,00,000 ರೂ.ಗಳ ಪರಿಹಾರವನ್ನು ಘೋಷಿಸಿದ್ದು, ಮಂಜೂರಾತಿಗಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ. ಯಾವುದೇ ಕ್ರಿಮಿನಲ್ ಪ್ರಕರಣದ ಸಂತ್ರಸ್ಥರು ಮತ್ತು ಮೃತ ಸಂತ್ರಸ್ಥರ ವಾರಸುದಾರರು ಈ ಯೋಜನೆಯಡಿ ಪರಿಹಾರ ಪಡೆಯಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ಸಂಬಂಧಪಟ್ಟ ಆಯಾ ತಾಲೂಕಿನ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಈ ಸಂತ್ರಸ್ಥ ಪರಿಹಾರ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.