ಸಂತ್ರಸ್ಥರಿಗೆ ಶಾಸಕರಿಂದ ಹಕ್ಕು ಪತ್ರ ವಿತರಣೆ

ಬಾಗಲಕೋಟೆ,ಜ.12 : ನವನಗರ ಯುನಿಟ್-2ರ ವ್ಯಾಪ್ತಿಯಲ್ಲಿ ಬರುವ 168 ವಿವಿಧ ಸಂತ್ರಸ್ಥರಿಗೆ ಶಾಸಕರು ಆಗಿರುವ ಬಿಟಿಡಿಎ ಅಧ್ಯಕ್ಷರಾದ ವೀರಣ್ಣ ಚರಂತಿಮಠ ಅವರು ಹಕ್ಕು ಪತ್ರಗಳನ್ನು ಸೋಮವಾರ ವಿತರಿಸಿದರು.
ಬಿಟಿಡಿಎ ಆವರಣದಲ್ಲಿರುವ ಸಭಾಭವನದಲ್ಲಿ ಹಮ್ಮಿಕೊಂಡ ಹಕ್ಕುಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಬಿಡಿಟಿಎ ಅಧ್ಯಕ್ಷ ಸ್ಥಾನಕ್ಕೆ ಬಂದ ನಂತರ ಇಲ್ಲಿಯವರಗೆ 6 ಬಾರಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡು ಒಟ್ಟು 777 ವಿವಿಧ ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಮೊದಲನೇ ಸಲ 72, 2ನೇ ಬಾರಿ 93, 3ನೇ ಬಾರಿ 160, 4ನೇ ಬಾರಿ 123, 5ನೇ ಸಲ 161 ಹಾಗೂ 6ನೇ ಬಾರಿ ಸೋಮವಾರ 168 ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ತಿಳಿಸಿದರು.
ಹಕ್ಕುಪತ್ರ ವಿತರಿಸಿದ 168 ಸಂತ್ರಸ್ಥರುಗಳಲ್ಲಿ 97 ಬಾಡಿಗೆದಾರರು, 5 ಜನ ಬಯಲು ಜಾಗೆ ಸಂತ್ರಸ್ಥರು, 12 ಜನ ಮುಖ್ಯ ಸಂತ್ರಸ್ಥರು, 29 ಜನ ಮುಖ್ಯ ಸಂತ್ರಸ್ಥರ ವಯಸ್ಕರ ಮಕ್ಕಳು, 11 ಜನ ಅತೀಕ್ರಮಣದಾರರು, 12 ಜನ ವಾಣಿಜ್ಯ ಹಾಗೂ ಇಬ್ಬರು ಅತಿಥಿ ಕುಟುಂಬದ ಸಂತ್ರಸ್ಥರು ಇದ್ದಾರೆ ಎಂದರು. ಹಕ್ಕುಪತ್ರ ಪಡೆದ ಸಂತ್ರಸ್ಥರು 3 ತಿಂಗಳೊಳಗಾಗಿ ನೊಂದಣಿ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡು ಒಂದು ವರ್ಷದೊಳಗೆ ಮನೆಯನ್ನು ಕಟ್ಟಿಕೊಳ್ಳಬೇಕು. ಇಲ್ಲವಾದಲ್ಲಿ ಹಕ್ಕುಪತ್ರವನ್ನು ಮರಳಿ ಬಿಟಿಡಿಎಗೆ ಪಡೆದುಕೊಳ್ಳಲಾಗುವುದೆಂದು ತಿಳಿಸಿದರು.
ಹಕ್ಕುಪತ್ರ ವಿತರಣೆ ಪೂರ್ವದಲ್ಲಿ ನಡೆದ ಸಭೆಯಲ್ಲಿ ಬಿಟಿಡಿಎ ವ್ಯಾಪ್ತಿಯ 288 ಕಟ್ಟಿದ ಅಂಗಡಿಗಳನ್ನು ವ್ಯಾಲುವೇಶನ್ ಮಾಡಿ ಹಕ್ಕುಪತ್ರ ವಿತರಿಸಲು ನಿರ್ಧರಿಸಲಾಗಿದೆ. ನವೆಂಬರ ಮಾಹೆಯಲ್ಲಿನ ಕೆಲವು ಕಾಮಗಾರಿಗಳಿಗೆ ಅನುಮೋದನೆ ಸಹ ನೀಡಲಾಗಿದೆ. ಬಿಟಿಡಿಎ ವತಿಯಿಂದ ಪಾವತಿಯಾಗದೇ ಬಾಕಿ ಇರುವ 1.87 ಕೋಟಿ ರೂ.ಗಳ ವಿದ್ಯುತ್ ಬಿಲ್ ಪಾವತಿಗೂ ಸಹ ಸೂಚಿಸಲಾಗಿದೆ. ಯುನಿಟ್-1 ಮತ್ತು 2ರಲ್ಲಿ ಸಿಟಿ ಸರ್ವೆ ಹಾಗೂ ಕೆಜಿಪಿ ಆಗಿರಲಿಲ್ಲ. ಕೆಜೆಪಿ ಮಾಡಲು ಸರಕಾರಕ್ಕೆ 27 ಲಕ್ಷ ರೂ.ಗಳನ್ನು ತುಂಬಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬುಡಾದ ಅಧ್ಯಕ್ಷ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಸದಸ್ಯ ಕುಮಾರ ಎಳ್ಳಿಗುತ್ತಿ, ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಕುಮಾರ ಎಳ್ಳಿಗುತ್ತಿ, ಬಿಟಿಡಿಎ ಪುನರ್ವಸತಿ ಅಧಿಕಾರಿ ಗಣಪತಿ ಪಾಟೀಲ, ಮುಖ್ಯ ಇಂಜಿನೀಯರ್ ಅಶೋಕ ವಾಸನದ ಸೇರಿದಂತೆ ಇತರರು ಉಪಸ್ಥಿತರಿದ್ದರು.