ಸಂತ್ರಸ್ಥರಿಗೆ ತ್ವರಿತ ಪರಿಹಾರಕ್ಕೆ ಸೂಚನೆ


ಹಾವೇರಿ.ನ.22: ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆ, ಬೆಳೆ ಸಮೀಕ್ಷೆಯನ್ನು ತ್ರಿಸದಸ್ಯ ಸಮಿತಿಯಿಂದ ಜಂಟಿ ಸಮೀಕ್ಷೆಕೈಗೊಂಡು ಏಳುದಿನದೊಳಗಾಗಿ ಸರ್ವೇ ಕಾರ್ಯಪೂರ್ಣಗೊಳಿಸಿ ಪರಿಹಾರ ಸಾಫ್ಟವೇರ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಸಂತ್ರಸ್ಥರಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು(ಯೋಜನೆ) ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಸೂಚನೆ ನೀಡಿದರು.
ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅತಿವೃಷ್ಟಿಹಾನಿ, ಸಕಾಲ ಯೋಜನೆ, ಕಂದಾಯ ಪ್ರಕರಣಗಳ ವಿಲೇವಾರಿ, ಕೋವಿಡ್ ಲಸಿಕೆ ಕಾರ್ಯಕ್ರಮಗಳ ಪ್ರಗತಿ ಸೇರಿದಂತೆ ಜಿಲ್ಲಾ ಪಂಚಾಯತ್ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಅತಿವೃಷ್ಟಿ ಹಾನಿ ಕುರಿತಂತೆ ಮಾಹಿತಿ ಪಡೆದುಕೊಂಡರು.
ಸಮೀಕ್ಷೆ ನಿಖರವಾಗಿರಲಿ: ಮಳೆಯಿಂದ ಹಾನಿಯಾದ ಮನೆ ಹಾಗೂ ಬೆಳೆಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ದಾಖಲೀಕರಣ ನಿಖರವಾಗಿರಬೇಕು. ಹಾನಿಯ ಪ್ರಮಾಣ ಪರಿಗಣಿಸಿ ಸಿ'ಯಿಂದಬಿ’ ವರ್ಗಕ್ಕೆ ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಮನೆ ಮತ್ತು ಬೆಳೆ ತಾಕುಗಳಲ್ಲಿ ಫಲಾನುಭವಿಗಳ ವಿವರ, ಹಾನಿಯ ಮಾಹಿತಿಯನ್ನು ಛಾಯಾಚಿತ್ರ, ವಿಡಿಯೋಗ್ರಫಿ ಹಾಗೂ ಜಿಪಿಎಸ್ ಅಳವಡಿಸಬೇಕು. ಕೇಂದ್ರ ವಿಪತ್ತು ನಿರ್ವಹಣಾ ತಂಡದ ಮುಂದೆ ಹಾನಿಯ ಪ್ರಮಾಣವನ್ನು ಸಮರ್ಥವಾಗಿ ಸಾಕ್ಷ್ಯಸಹಿತವಾಗಿ ಮಂಡಿಸಲು ದಾಖಲೀಕರಣಮಾಡಬೇಕು. ಅತಿವೃಷ್ಟಿ ಹಾನಿಯ ಸಮೀಕ್ಷೆಯ ಉಸ್ತುವಾರಿಯನ್ನು ಉಪ ವಿಭಾಗಾಧಿಕಾರಿಗಳು ವಯಕ್ತಿಕ ಗಮನಹರಿಸಲು ಸೂಚನೆ ನೀಡಿದರು.
ಹಾನಿಯ ಕುರಿತಂತೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ನವಂಬರ್ 17 ರಿಂದ ನ.20ರವರೆಗೆ ಅಧಿಕ ಮಳೆಯಾಗಿದ್ದು, ವಾಡಿಕೆ 37 ಎಂ.ಎಂ. ಎದುರು 54 ಎಂ.ಎಂ. ಮಳೆಯಾಗಿದೆ. ನವಂಬರ್ 17 ರಂದು 16.7 ಎಂ.ಎಂ., ನ.18 ರಂದು 17.1 ಎಂ.ಎಂ., ನವಂಬರ್ 20 ರಂದು 54.8 ಎಂ.ಎಂ. ಮಳೆಯಾಗಿದೆ. ಈ ಅವಧಿಯಲ್ಲಿ 1153 ಮನೆಗಳು ಹಾನಿಯಾಗಿವೆ. ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ ಕಾರಣ ಏಳು ಕಾಳಜಿ ಕೇಂದ್ರಗಳನ್ನು ತೆರೆದು 137 ಕುಟುಂಬಗಳ 750 ಸಂತ್ರಸ್ತರು, ನಾಲ್ಕು ಜಾನುವಾರುಗಳಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 15 ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. 18 ಜಾನುವಾರುಗಳ ಜೀವಹಾನಿಯಾಗಿದೆ. ಶುಂಠಿ, ಟಮೋಟೋ, ಮೆಣಸಿನಕಾಯಿ ಬೆಳೆ ಸೇರಿದಂತೆ ಅಂದಾಜು 359.60 ಹೆಕ್ಟೇರ್ ತೋಟಗಾರಿಕೆ ಬೆಳೆ, ಹತ್ತಿ, ಭತ್ತ, ಮೆಕ್ಕೆಜೋಳ ಸೇರಿದಂತೆ ಅಂದಾಜು 26,649 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 135 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 125 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಮೂರು ಕಡೆ ಸಣ್ಣ ನೀರಾವರಿ ಇಲಾಖೆ ಕೆರೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.