ಸಂತ್ರಸ್ತೆಯರಿಗೆ ರಕ್ಷಣೆ: ಪರಂ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೩೧;ಸಂಸದ ಪ್ರಜ್ವಲ್‌ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರಿಗೆ ರಕ್ಷಣೆ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರವಾಗಿ ಸಂತ್ರಸ್ತೆಯರು ಪೊಲೀಸರು ಹಾಗೂ ಎಸ್‌ಐಟಿ ಮುಂದೆ ಬಂದು ಧೈರ್ಯವಾಗಿ ಹೇಳಿಕೊಳ್ಳಬೇಕು ಈ ಹಿಂದೆಯೇ ಅವರಿಗೆ ರಕ್ಷಣೆ ಕೊಡುವುದಾಗಿ ಹೇಳಿದ್ದೇವೆ ಎಂದರು.
ಸಂತ್ರಸ್ಥೆಯರಿಗೆ ಎಲ್ಲ ರೀತಿಯ ರಕ್ಷಣೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಧೈರ್ಯವಾಗಿ ಅವರು ಬಂದು ಅವರು ದೂರು ಕೊಡಬೇಕು ಎಂದರು.
ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ನಿನ್ನೆ ರಾತ್ರಿ ಸುಮಾರು ೧೨.೫೦ರ ಸುಮಾರಿಗೆ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಮುಂದಿನ ಕಾನೂನು ಕ್ರಮವನ್ನು ಪೊಲೀಸರು ಕೈಗೊಳ್ಳುವರು ಎಂದರು.
ಮೊಬೈಲ್ ಕಳೆದು ಹೋಗಿದೆ ಎಂದು ಪ್ರಜ್ವಲ್‌ರೇವಣ್ಣ ಹೇಳುತ್ತಿದ್ದಾರಂತಲ್ಲ ಎಂಬ ಪ್ರಶ್ನೆಗೆ ಯಾವುದೋ ಮೂಲದಿಂದ ಬಂದ ಮಾಹಿತಿಯನ್ನು ನಂಬಲು ಸಾಧ್ಯವಿಲ್ಲ. ಈ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಪ್ರಜ್ವಲ್‌ರೇವಣ್ಣ ನಮ್ಮ ದೇಶದಲ್ಲಿ ಇರದ ಕಾರಣ ಬಂಧನ ವಿಳಂಬವಾಗಿದೆ ಅಷ್ಟೆ. ಅವರು ಹೊರ ದೇಶದಲ್ಲಿದ್ದರು. ಹಾಗಾಗಿ,ನಮ್ಮ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.