ಸಂತ್ರಸ್ತೆಗೆ ಅಪಾಯವಾದರೆ ಸರ್ಕಾರವೇ ಹೊಣೆ

ಬೆಂಗಳೂರು ಮಾ.೨೯- ಸಿಡಿ ಸಂತ್ರಸ್ತೆ ಯುವತಿಯ ಜೀವಕ್ಕೆ ಅಪಾಯವಾದರೆ ಅದಕ್ಕೆ ರಾಜ್ಯ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಸಂತ್ರಸ್ತೆ ಯುವತಿ ಪ್ರಾರಂಭದ ಆಡಿಯೋದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಳು, ಈಗ ತನಗೆ ಪ್ರಾಣಭಯ ಇದೆ ಎಂದು ಪತ್ರ ಬರೆದಿದ್ದಾಳೆ. ಆ ಯುವತಿಯ ಪ್ರಾಣಕ್ಕೇನಾದರೂ ಅಪಾಯ ಎದುರಾದರೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಗೃಹಸಚಿವ ಬಸವರಾಜ ಬೊಮ್ಮಾಯ ಮತ್ತು ಸರ್ಕಾರವೇ ಹೊಣೆಯಾಗುತ್ತದೆ. ಎಂದು ಸಿದ್ದರಾಮಯ್ಯ ಹೇಳಿದ್ದಾರೆ
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಸಿಡಿ ಹಗರಣದ ಯುವತಿ ತನಗೆ ಪ್ರಾಣ ಭಯ ಇದೆ ಎಂದು ರಾಜ್ಯದ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಬರೆದಿದ್ದಾರೆನ್ನಲಾದ ಪತ್ರ ಗಾಬರಿ ಹುಟ್ಟಿಸುವಂತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ರಾಜ್ಯದಲ್ಲಿ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂದು ಟ್ವಿಟರ್‌ನಲ್ಲಿ ಹರಿಹಾಯ್ದಿದ್ದಾರೆ.
ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಂತ್ರಸ್ತೆ ಯುವತಿ ಬರೆದ ಪತ್ರದಲ್ಲಿ ಎಸ್.ಐ.ಟಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಅವರು ಸಾಕ್ಷ್ಯನಾಶ ಮಾಡುತ್ತಿದ್ದಾರೆ, ತನ್ನ ವಿರೋಧಿಗಳ ಜೊತೆ ಷಾಮೀಲಾಗಿದ್ದಾರೆ ಎಂದೆಲ್ಲ ಆರೋಪಿಸಿರುವುದು ಗಂಭೀರವಾದ ವಿಷಯ. ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ
ಸಂತ್ರಸ್ತೆ ಯುವತಿ ನಿರಂತರವಾಗಿ ವಿಡಿಯೋ, ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದರೆ, ರಾಜ್ಯದ ಮುಖ್ಯಮಂತ್ರಿ ಗೃಹ ಸಚಿವರು ಮತ್ತು ಪೊಲೀಸರು ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಫಲಿತಾಂಶ ಏನು ಎಂದು ಅವರು ಪ್ರಶ್ನಿಸಿದ್ದಾರೆ
ಸಿಡಿ ಬಹಿರಂಗಗೊಂಡು ೨೭ ದಿನಗಳು ಕಳೆದರೂ ಹಗರಣದ ಕೇಂದ್ರವ್ಯಕ್ತಿಯಾದ ಸಂತ್ರಸ್ತ ಯುವತಿಯ ವಿಚಾರಣೆ ನಡೆಸಲು ಸಾಧ್ಯವಾಗದ ಪೊಲೀಸರ ವೈಫಲ್ಯಕ್ಕೆ ಯಾರು ಹೊಣೆಅವರ ಮೇಲೆ ಪ್ರಭಾವ ಬೀರುತ್ತಿರುವವರು ಯಾರು ಎಂದು ಪ್ರಶ್ನಿಸಿರುವ ಅವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಬೇರೆ ಸಾಕ್ಷಿ ಬೇಕೇ ಎಂದು ಅವರು ಹೇಳಿದ್ದಾರೆ.