ಸಂತ್ರಸ್ತರ ಸಮಸ್ಯೆ ಆಲಿಸದಿದ್ದರೆ ಜನಪ್ರತಿನಿಧಿಗಳಿಗೆ ಶಾಪ ತಟ್ಟುತ್ತದೆ:ಲಕ್ಷ್ಮಣ ದಸ್ತಿ

ಬೀದರ, ಜು. 15ಃ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ವತಿಯಿಂದ ಜುಲೈ 1 ರಿಂದ ನಗರದ ಬೀದರ ಜಿಲ್ಲಾ ಉಸ್ತುವಾರಿ ಕಚೇರಿ ಎದುರು ಅಹೋರಾತ್ರಿ ಧರಣಿಯು ಯಶಸ್ವಿಯಾಗಿ 14 ದಿನ ಪೂರ್ಣಗೊಳಿಸಿ, 15ಕ್ಕೆ ಕಾಲಿರಿಸಿದೆ.

ಕಲ್ಯಾಣ-ಕರ್ನಾಟಕ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜುಲೈ 1 ರಿಂದ ಆರಂಭವಾದ ಅಹೋರಾತ್ರಿ ಧರಣಿಯು 13ನೇ ದಿನದಲ್ಲಿ ಕಾಲಿಟ್ಟರೂ, ಜಿಲ್ಲೆಯ ಶಾಸಕರು, ಸಚಿವರು ಹಾಗೂ ಕೇಂದ್ರ ಸಚಿವರ ಪೈಕಿ ಯಾರೊಬ್ಬರೂ ಈ ಕಡೆ ಮುಖ ಮಾಡದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹೋರಾಟಕ್ಕಿಳಿದರೆ, ಸರಕಾರವೇ ಅಲ್ಲಾಡುತ್ತದೆ. ಚುನಾಯಿತ ಪ್ರತಿನಿಧಿಗಳು ಜನತೆಯ ಆಸ್ತಿಯಾಗಿದ್ದು, ಸಂತ್ರಸ್ತ ರೈತರು ಛಳಿ-ಮಳೆ-ಬಿಸಿಲು-ಗಾಳಿಯನ್ನು ಲೆಕ್ಕಿಸದೆ ಧರಣಿ ನಡೆಸುತ್ತಿದ್ದರೆ, ಬೀದರ ಜಿಲ್ಲೆಯ ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ. ಹಾಗೂ ಕೇಂದ್ರ ರಾಜ್ಯ ಸಚಿವರು ಸಂತ್ರಸ್ತ ರೈತರ ಧರಣಿ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ ಹಾಗೂ ರಾಜಕಾರಣಿಗಳ ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಕಿಡಿಕಾರಿದರು.

ಬೀದರ ಜಿಲ್ಲೆಯ ರಾಜಕೀಯ ನಾಯಕರು ಮುಂಬರುವ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ಕಟ್ಟÀಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಬೀದರ ಜಿಲ್ಲೆಯ ರಾಜಕೀಯ ನಾಯಕರು ರೈತರ ಶಾಪಕ್ಕೆ ಗುರಿಯಾಗದೇ, ಸಂತ್ರಸ್ತ ರೈತರ ಸಮಸ್ಯೆಗಳನ್ನು ಆಲಿಸಬೇಕೆಂದು ಕಿವಿಮಾತು ಹೇಳಿದರು.

ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹೊಚಕನಳ್ಳಿಯವರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ ಹಾಗೂ ನಿರ್ದೇಶಕ ವೀರಭದ್ರಪ್ಪ ಉಪ್ಪಿನ್ ಅವರು ಮಾತನಾಡಿದರು.

  ಶಿವಕುಮಾರ ಬೆಲ್ದಾಳೆ, ಸಂತೋಷ, ರೋಹನಕುಮಾರ, ಶಿವರಾಜ್, ಶ್ರೀಶೈಲ ತಡಕಲ್ ರವರು ಹಾಜರಿದ್ದರೆ, ಬುಧವಾರ ನಡೆದ ಅಹೋರಾತ್ರಿ ಧರಣಿಯಲ್ಲಿ ಖೇಣಿ ರಂಜೋಳ ಗ್ರಾಮದ ಪ್ರಕಾಶ ಭೀಮರಾವ್, ಕರಬಸಪ್ಪ, ವಿಜಯಕುಮಾರ್, ರವಿಕುಮಾರ್, ಗೌತಮ್, ಉಮೇಶ್, ಶಿವಕುಮಾರ, ಪ್ರಸಾದ, ರಾಹುಲ್, ಹಣಮಂತರಾಯ, ಸುಕೇಶ್, ಶಫಿಯೋದ್ದೀನ್, ಹಬೀಬ್, ರಾಜಶೇಖರ ಮುಂತಾದವರು ಭಾಗವಹಿಸಿದ್ದರು.