ಸಂತ್ರಸ್ತರ ವಿಷಯದಲ್ಲಿ ಸರ್ಕಾರದ ಮಲತಾಯಿ ಧೋರಣೆ

ಚಿಂಚೋಳಿ,ಅ.27-ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತಾಲೂಕ ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರಿನಲ್ಲಿ ಬಿದ್ದ ಮಳೆಯ ಹಾನಿಯ ಬಗ್ಗೆ ವಹಿಸಿರುವ ಕಾಳಜಿ ಇಲ್ಲಿನ ಸಂತ್ರಸ್ತರಿಗೆ ಏಕಿಲ್ಲ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು, ಬೆಂಗಳೂರಿನ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳದಲ್ಲೇ ಸಂತ್ರಸ್ತ ಕುಟುಂಬಗಳಿಗೆ ಪ್ರತಿ ಮನೆಗೆ 25,000 ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಭಾರಿ ಮಳೆಯಿಂದ ಮನೆಗಳು, ಹೊಗಳು ಮುಳುಗಡೆಯಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿನ ಸಂತ್ರಸ್ತರಿಗೆ ತ್ವರಿತವಾಗಿ ಯಾವುದೇ ನೆರವು ನೀಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಹಾಗೂ ಚಿಂಚೋಳಿ ಪಟ್ಟಣದಲ್ಲಿ ಮಳೆಯಿಂದ ಸಾರ್ವಜನಿಕರು ಸಾಕಷ್ಟು ಹಾನಿಯನ್ನು ಅನುಭವಿಸಿದ್ದಾರೆ. ಹಾನಿಯ ಸಮೀಕ್ಷೆ ಸರ್ವೆ ಮಾಡಲು ಬರುತ್ತಿದ್ದಾರೆ ಎಂದು ದಿನಗಳನ್ನು ತಳ್ಳುತ್ತಿದ್ದಾರೆ ಇಲ್ಲಿನ ಸಂತ್ರಸ್ತ ನೋವು ಕೇಳುವವರು ಯಾರೂ ಇಲ್ಲದಂತಾಗಿದೆ ಒಂದು ವಾರದ ಒಳಗಾಗಿ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಇಲ್ಲದಿದ್ದರೆ ತಾಲೂಕ ನಾಗರಿಕರ ಹೋರಾಟ ಸಮಿತಿ ವತಿಯಿಂದ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕ ನಾಗರಿಕರ ಹೋರಾಟ ಸಮಿತಿ ಮುಖಂಡರಾದ ನರಸಪ್ಪ ಕಿವಣನೋರಕರ. ವಿಜಯ್ ಕುಮಾರ ಗಂಗನಪಳ್ಳಿ. ರಮೇಶ ಗೋಣಿ. ಉಪಸ್ಥಿತರಿದ್ದರು