ಸಂತ್ರಸ್ತರ ಮೇಲೆ ಸಚಿವರ ದೌರ್ಜನ್ಯ, ದಬ್ಬಾಳಿಕೆ: ಬೆಳ್ಳುಬ್ಬಿ ಆಕ್ರೋಶ

ಕೊಲ್ಹಾರ:ಮಾ.10:ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಪ್ರಸಾದ ಛತ್ರ ತೆರವಿಗೆ ನೋಟಿಸ್ ನೀಡಿರುವುದು ಹಾಗೂ ಪಟ್ಟಣದ ಅಮಾಯಕ ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ಸಚಿವ ಶಿವಾನಂದ ಪಾಟೀಲರ ಸರ್ವಾಧಿಕಾರಿ ಧೋರಣೆ ಖಂಡನೀಯ ಎಂದು ದ್ಯಾಮವ್ವ ದೇವಿ ದೇವಸ್ಥಾನ ಕಮೀಟಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದನಂತರ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಅಸಮಾದಾನ ಹೊರಹಾಕಿದರು.
ಬ.ಬಾಗೇವಾಡಿ ಮತಕ್ಷೇತ್ರದಲ್ಲಿ ಸಚಿವ ಶಿವಾನಂದ ಪಾಟೀಲರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಮತ ನೀಡಿ ಆಶಿರ್ವಧಿಸಿರುವ ಕೊಲ್ಹಾರ ಸಂತ್ರಸ್ತರ ಮೇಲೆ, ಮತದಾರರ ಮೇಲೆ ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಿರಂತರವಾಗಿ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ದೇಶದ ಅಭಿವೃದ್ಧಿಗಾಗಿ ಮನೆ ಮಠ ಕಳೆದುಕೊಂಡ ಅಮಾಯಕ ಕೊಲ್ಹಾರ ಪಟ್ಟಣದ ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಪುನರ್ವಸತಿ ಅಧಿಕಾರಿಗಳು ಮಾಡಿರುವ ತಪ್ಪಿಗೆ ಅಮಾಯಕ ಸಂತ್ರಸ್ತರ ಮೇಲೆ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ?. ನಿವೇಶನಗಳ ಅಕ್ರಮವನ್ನು ಸಿಐಡಿಗೆ ನೀಡಿರುವುದು ಯಾವ ನ್ಯಾಯ?. ಸಂತ್ರಸ್ತರು ಮಾಡಿರುವ ಅಂತಹ ಮಹಾನ್ ಅಪರಾಧವಾದರು ಏನು?
ಎಂದು ಪ್ರಶ್ನಿಸಿದರು?. ಪ್ರತಿದಿನ ಕೂಲಿನಾಲಿ ಮಾಡಿ ಬದುಕಿನ ಬಂಡಿ ಸಾಗಿಸುವ ಅಮಾಯಕ ಸಂತ್ರಸ್ತರನ್ನ ಸಿಐಡಿ ಅಧಿಕಾರಿಗಳು ಬೆಂಗಳೂರಿಗೆ ಕರೆಸುತ್ತಿದ್ದಾರೆ ತನಿಖೆಯ ಹೆಸರಿನಲ್ಲಿ ಪುರುಷರು, ಮಹಿಳೆಯರೆನ್ನದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದೆ, ದೌರ್ಜನ್ಯವೆಸಗಲಾಗುತ್ತಿದೆ ಈ ಬಗ್ಗೆ ಸಂತ್ರಸ್ತರು ಪ್ರತಿದಿನ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ತನಿಖೆಯ ಭಯದಿಂದ ಸಂತ್ರಸ್ತರು ಪ್ರಾಣಕ್ಕೆ ಅಪಾಯ ಮಾಡಿಕೊಂಡಲ್ಲಿ ಯಾರು ಹೊಣೆ?. ಆ ಕುಟುಂಬದ ಗತಿಯೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಶಿವಾನಂದ ಪಾಟೀಲ್ ಹಾಗೂ ಅವರ ಕೆಲ ಹಿಂಬಾಲಕರ ಕುಮ್ಮಕ್ಕಿನಿಂದ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನ ಪ್ರಸಾದ ನಿಲಯ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪುನರ್ವಸತಿ ಅಧಿಕಾರಿಗಳಿಂದ ನೋಟಿಸ್ ಜಾರಿ ಮಾಡಿಸಿರುವ ಸಚಿವ ಶಿವಾನಂದ ಪಾಟೀಲರೇ
*ಪಟ್ಟಣದಲ್ಲಿ ಮಸೀದಿ ಹಾಗೂ ದರ್ಗಾಗಳು ಮಾಡಿಕೊಂಡಿರುವ ಒತ್ತುವರಿಯ ಬಗ್ಗೆ ತಮ್ಮ ನಿಲುವೇನು?
*ಪಟ್ಟಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ರಿಯಾಯಿತಿ ದರದಲ್ಲಿ ಪಡೆದುಕೊಂಡ ನಾಲ್ಕು ಎಕರೆಯ ಜಾಗದೊಂದಿಗೆ 2 ಎಕರೆಗಿಂತ ಹೆಚ್ಚಿನ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಇದನ್ನು ವಶಕ್ಕೆ ಪಡೆದುಕೊಳ್ಳುವುದು ಯಾವಾಗ?.
*ಪಟ್ಟಣದ ಉದ್ಯಾನವನಗಳಿಗಾಗಿ ಮೀಸಲಿಟ್ಟ ಜಾಗದಲ್ಲಿ ಎರಡು ಬಸ್ ನಿಲ್ದಾಣಗಳನ್ನ ನಿರ್ಮಿಸಲಾಗಿದೆ ಹಾಗಾದರೆ ಬಸ್ ನಿಲ್ದಾಣದ ಮೂಲ ಜಾಗ ಇರುವುದು ಎಲ್ಲಿ ಅದನ್ನು ಯಾರು ಅತಿಕ್ರಮಿಸಿದ್ದಾರೆ?.
*ಪಟ್ಟಣದ ದಿಗಂಬರ ಮಠದಿಂದ ಸ್ಟೇಟ್ ಬ್ಯಾಂಕ್ ವರೆಗಿನ 18 ಮೀಟರ ರಸ್ತೆ ಪಕ್ಕದಲ್ಲಿ 20 ಮೀಟರ ಜಾಗವನ್ನು ಪಾಕಿರ್ಂಗ್ ಸ್ಥಳಕ್ಕಾಗಿ ಬಿಟ್ಟಿದ್ದ ಆ ಜಾಗದಲ್ಲಿ ಕೆಲವರು ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿದ್ದಾರೆ ಅವುಗಳಿಗೆ ನೋಟಿಸ್ ನೀಡುವುದು ಯಾವಾಗ?.
*ಪುನರ್ವಸತಿ ಸರ್ಕಾರಿ ಜಮೀನನಲ್ಲಿ ಅಕ್ರಮವಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ ಅದಕ್ಕೆ ನಿಮ್ಮ ಉತ್ತರವೇನು?.
*ಪಟ್ಟಣದ ಕೃಷ್ಣಾತೀರ ರೈತರ ಸಹಕಾರಿ ಸಂಘ ಇವರು ನಿವೇಶನಕ್ಕಾಗಿ ಪುನರ್ವಸತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಾಗ ಸಂಘ ಸಂಸ್ಥೆಗಳು ಪುನರ್ವಸತಿ ನಿವೇಶನ ಪಡೆಯಬೇಕಾದರೆ ಮುಳುಗಡೆಯಾಗುವ ಸಂದರ್ಭದಲ್ಲಿ ಆಯಾ ಸಂಘ ಸಂಸ್ಥೆಗಳು ಆ ಪುನರ್ವಸತಿ ಕೇಂದ್ರದಲ್ಲಿ ಇದ್ದಲ್ಲಿ ಮಾತ್ರ ನಿವೇಶನ ಕಲ್ಪಿಸುವುದಾಗಿ ಪುನರ್ವಸತಿ ಅಧಿಕಾರಿಗಳು ಹಿಂಬರಹದಲ್ಲಿ ತಿಳಿಸಿದ್ದಾರೆ. ಆದರೆ ಪುನರ್ವಸತಿ ಕಲ್ಪಿಸಿದ ತದನಂತರ ಪಟ್ಟಣದಲ್ಲಿ ಪ್ರಾರಂಭವಾದ ವಿಜಯಪುರ ಡಿಸಿಸಿ ಬ್ಯಾಂಕ್ ಕೊಲ್ಹಾರ ಶಾಖೆಗೆ 8 ಗುಂಟೆ ಜಾಗವನ್ನು ಮಂಜೂರು ಮಾಡಿರುವ ಬಗ್ಗೆ ದಾಖಲೆಗಳಿದ್ದು ಡಿಸಿಸಿ ಬ್ಯಾಂಕಿಗೆ ಯಾವ ಮಾನದಂಡದ ಮೇಲೆ ನಿವೇಶನ ಮಂಜೂರು ಮಾಡಿರುತ್ತಾರೆ ಎನ್ನುವುದಕ್ಕೆ ನಿಮ್ಮಲ್ಲಿ ಉತ್ತರವಿದ್ದರೆ ತಿಳಿಸಿ? ಈ ತರಹ ಪಟ್ಟಣದಲ್ಲಿ ಅನೇಕ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನಾನು ದಾಖಲೆ ಸಮೇತ ತೆರೆದಿಡುತ್ತೆನೆ ತಾಕತ್ತಿದ್ದರೆ ಸಚಿವರು ತನಿಖೆ ಮಾಡಿಸಿ ಜಾಗಗಳನ್ನು ತೆರವುಗೊಳಿಸಲಿ ಎಂದು ಸವಾಲು ಹಾಕಿದರು.
ಸಚಿವರ ಚೇಲಾಗಳು ಪಟ್ಟಣದಲ್ಲಿ ನಿರಂತರವಾಗಿ ಅಮಾಯಕರ ಮೇಲೆ, ಬಡವರ ಮೇಲೆ ದಬ್ಬಾಳಿಕೆ, ದೌರ್ಜನ್ಯವೆಸಗುತ್ತಿದ್ದಾರೆ ಸಚಿವರು ಇದಕ್ಕೆ ಕಡಿವಾಣ ಹಾಕುವುದು ಬಿಟ್ಟು ಅಂತಹವರಿಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಮನೆ ಮಠ ಸಹಿತ ಇದ್ದ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿ ಬೀದಿಗೆ ಬಿದ್ದಿರುವ ಜನರ ನೋವು ಏನು ಎನ್ನುವುದು ನಿಮಗೆ ಅರ್ಥವಾಗದು!. ನೊಂದಿರುವ ಸಂತ್ರಸ್ತರನ್ನ ಇನ್ನಷ್ಟು ನೋಯಿಸಬೇಡಿ, ಬಡವನ ಸಿಟ್ಟು ದವಡೆಗೆ ಮೂಲ ಎಂದು ಜನರು ಸುಮ್ಮನಿದ್ದಾರೆ, ಹತಾಶೆಗೊಂಡಿರುವ ಸಂತ್ರಸ್ತರ ಸಿಟ್ಟು ಜ್ವಾಲಾಮುಖಿಯಾಗಿ ಸ್ಪೋಟಗೊಳ್ಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು. ಬಡವರು ಹಾಕುತ್ತಿರುವ ಕಣ್ಣೀರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ ಎಂದು ಗುಡುಗಿದರು.

ದ್ಯಾಮವ್ವ ದೇವಿ ದೇವಸ್ಥಾನದ ಪ್ರಸಾದ ಛತ್ರ ತೆರವು ಮಾಡಲು ಯಾವ ಕಾರಣಕ್ಕೂ ನಾವುಗಳು ಬಿಡುವುದಿಲ್ಲ, ಈ ಮೇಲೆ ಹೇಳಿರುವ ಒತ್ತುವರಿಗಳನ್ನ ಭೇದಭಾವ ಮಾಡದೆ ಸಂಪೂರ್ಣ ತೆರವುಗೊಳಿಸಲಿ ಆ ಕ್ಷಣದಲ್ಲಿ ನಾವು ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರ ನೇತೃತ್ವದಲ್ಲಿ ಸ್ವಯಂಪ್ರೇರಿತವಾಗಿ ಪ್ರಸಾದ ಛತ್ರ ತೆರವುಗೊಳಿಸುತ್ತೆವೆ, ಇಷ್ಟಕ್ಕೂ ಮೀರಿ ಪ್ರಸಾದ ಛತ್ರ ತೆರವುಗೊಳಿಸಲು ಬಂದರೆ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಪಟ್ಟಣದ ನಾಗರೀಕರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ.
ನೊಂದ ಜನಗಳ ವಿಷಯ, ಸಂತ್ರಸ್ತರ ವಿಷಯ ಬಂದಾಗ ಸಾವಿರಾರು ಜನ ಸಂತ್ರಸ್ತರೊಂದಿಗೆ ಬೆಂಗಳೂರಿನ ವಿಧಾನಸೌಧದ ಮುಂಭಾಗ ಧರಣಿ ಹಮ್ಮಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ ಪಂ ಸದಸ್ಯ ಅಪ್ಪಾಸಿ ಮಟ್ಯಾಳ್, ಮಹೇಶ್ ತುಂಬರಮಟ್ಟಿ, ಹುಚ್ಚಪ್ಪ ಬಾಟಿ, ಚಿದಾನಂದ ದಳವಾಯಿ, ಮಲ್ಲಪ್ಪ ತುಂಬುರಮಟ್ಟಿ, ನಾಮದೇವ್ ಪವಾರ್, ಪರಸು ಬರಗಿ, ರಮೇಶ್ ಬಗಲಿ ಸಹಿತ ಅನೇಕರು ಉಪಸ್ಥಿತರಿದ್ದರು.