ಸಂತ್ರಸ್ತರಿಗೆ ಮಲ್ಲಿಕಾರ್ಜುನ್ ಆರ್ಥಿಕ ನೆರವು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.27: ತಾಲ್ಲೂಕಿನಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವು ಮನೆಗಳು ನೆಲಕ್ಕುರಿಳಿದ್ದು ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವಿಗೆ ಸಮಾಜಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಆರ್ಥಿಕ ನೆರವಿನ ಹಸ್ತ ಚಾಚಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿಯ ಹೆಗ್ಗಡಹಳ್ಳಿ ಗ್ರಾಮವೊಂದರಲ್ಲೇ ಸುಮಾರು ಐದು ಮನೆಗಳು ಬಿದ್ದು ಹೋಗಿದ್ದು ಗ್ರಾಮೀಣ ಪ್ರದೇಶದ ಜನರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ.
ಗ್ರಾಮದ ನೇತ್ರಾವತಿಆನಂದ್, ಚಂದ್ರುರೇಖಾ, ಪುಟ್ಟಲಕ್ಷ್ಮಿ ರಂಗನಾಥ್, ರಾಣಿ ಲೇಟ್ ಮಹೇಶ್, ಜಯಮ್ಮಮಂಜೇಗೌಡ ಸೇರಿದಂತೆ ಹಲವು ಕುಟುಂಬಗಳು ಕೃಷಿ ಹಾಗೂ ಹೈನುಗಾರಿಕೆ ಮತ್ತು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಗಳು ಮಳೆಯ ಅನಾಹುತದಿಂದಾಗಿ ತಾವು ವಾಸಿಸುತ್ತಿದ್ದ ಮನೆಗಳು, ಮತ್ತು ದನಕರುಗಳನ್ನು ಕಟ್ಟುಹಾಕಲು ಬಳಸುತ್ತಿದ್ದ ಕೊಟ್ಟಿಗೆಗಳನ್ನು ಮಳೆ ಬಲಿ ತೆಗೆದುಕೊಂಡಿದೆ. ಇದರಿಂದಾಗಿ ರೈತರಿಗೆ ತೀವ್ರವಾದ ಸಮಸ್ಯೆಗಳಾಗಿದ್ದು ಇಷ್ಟುದಿನ ಬರಗಾಲದೊಂದಿಗೆ ಸಂಕಷ್ಟದ ಜೀವನ ಸಾಗಿಸುತ್ತಿದ್ದ ಕುಟುಂಬಗಳ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ತಾಲ್ಲೂಕು ಆಡಳಿತ ಕೂಡಲೇ ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಮಗೆ ಸರ್ಕಾರದ ವತಿಯಿಂದ ಪರಿಹಾರ ಒದಗಿಸಬೇಕು ಎಂದು ಮನೆ ಕಳೆದುಕೊಂಡ ಎಲ್ಲಾ ರೈತರು ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಗ್ರಾಮಕ್ಕೆ ಭೇಟಿ ನೀಡಿ ಮನೆ ಕಳೆದುಕೊಂಡ ರೈತ ಕುಟುಂಬಗಳಿಗೆ ಧೈರ್ಯ ತುಂಬುವ ಮೂಲಕ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದಾರೆ.
ಅಭಿಪ್ರಾಯ:- ಗ್ರಾಮದಲ್ಲಿ 5-6 ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿದ್ದು ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಮಾಜಸೇವಕ ಮಲ್ಲಿಕಾರ್ಜುನ್ ಗ್ರಾಮಕ್ಕೆ ಅಗಮಿಸಿ ಬಡರೈತ ಕುಟುಂಬಗಳಿಗೆ ಧೈರ್ಯ ತುಂಬುವ ಮೂಲಕ ಆರ್ಥಿಕ ಸಹಾಯ ಮಡಿದ್ದಾರೆ.
-ರಾಜೇಶ್, ಗ್ರಾಪಂ ಮಾಜಿ ಸದಸ್ಯ. ಹೆಗ್ಗಡಹಳ್ಳಿ