ಸಂತೋಷ್ ಹತ್ಯೆ: ನ್ಯಾಯಾಂಗ ತನಿಖೆಗೆ ಸಿದ್ದು ಆಗ್ರಹ

ತುಮಕೂರು/ಸಿರಾ, ಜು. ೨೨- ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಈಶ್ವರಪ್ಪನವರ ವಿರುದ್ಧ ಬಿ ರಿಪೋರ್ಟ್ ಹಾಕಿರುವುದು ಸರ್ಕಾರದ ಕುತಂತ್ರವಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಒತ್ತಾಯಿಸಿದರು.
ದಾವಣಗೆರೆಗೆ ತೆರಳುವ ಮಾರ್ಗಮಧ್ಯೆ ಸಿರಾ ಗ್ರಾಮ ದೇವತೆ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ವಿರುದ್ಧ ಬಿ ರಿಪೋರ್ಟ್ ಹಾಕುತ್ತಾರೆ ಎಂಬ ವಿಚಾರ ನಮಗೆಲ್ಲ ಮೊದಲೇ ಗೊತ್ತಿತ್ತು ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ನಾನು ಈ ಹಿಂದೆಯೂ ಹೇಳಿದ್ದೆ. ಈಗಲೂ ಮತ್ತೊಮ್ಮೆ ನ್ಯಾಯಾಂಗ ತನಿಖೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಈಶ್ವರಪ್ಪ ದುಡ್ಡು ಕೇಳಿದರೂ ಆದರೆ ದುಡ್ಡು ಕೊಡಲು ನನ್ನಿಂದ ಆಗಲಿಲ್ಲ. ಹಾಗಾಗಿ ನನಗೆ ಕೆಲಸ ಮಾಡಲು ಬಿಡದೆ ಕಿರುಕುಳ ನೀಡಿದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟಿದ್ದಾರೆ. ಹೀಗಿದ್ದರೂ ಬಿ ರಿಪೋರ್ಟ್ ಹಾಕಿದ್ದಾರೆ ಎಂದರೆ ಏನರ್ಥ. ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕು ಎಂದು ಆಗ್ರಹಿಸಿದರು.
ನಾನು ಯಾವತ್ತೂ ನನ್ನ ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ. ಆಗಸ್ಟ್ ೩ ಕ್ಕೆ ೭೫ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಹೀಗಾಗಿ ನನ್ನ ಸ್ನೇಹಿತರುಗಳು ಸೇರಿ ೭೫ ವರ್ಷ ಆಗುತ್ತಿದೆ, ಹುಟ್ಟುಹಬ್ಬ ಮಾಡುತ್ತೇವೆ ಎಂದು ಒಪ್ಪಿಸಿದ್ದಾರೆ ಅಷ್ಟೇ. ನಾವು ಅಧಿಕಾರಕ್ಕೆ ಬರಲು ಈ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದವರಿಗೆ ಟಿಕೆಟ್ ಕೊಡಬೇಕು ಎಂದೇನಿಲ್ಲ. ಅಲ್ಪಸಂಖ್ಯಾತರಿಗೂ ಮೀಸಲಾತಿ ಇರಬೇಕು. ಆದರೆ ಯಾರು ಗೆಲ್ಲುತ್ತಾರೋ ಅದನ್ನೆಲ್ಲ ನೋಡಿ ಅಂತಹವರಿಗೆ ಪಕ್ಷ ಟಿಕೆಟ್ ಕೊಡುತ್ತದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
ಮತ್ತೆ ಕೇಳಿಸಿದ ಸಿಎಂ ಕೂಗು
ದಾವಣಗೆರೆಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತುಮಕೂರಿನ ಡಿ.ಎಂ. ಪಾಳ್ಯ ಬಳಿ ಅದ್ದೂರಿಯಾಗಿ ಸ್ವಾಗತಿಸಿದ ಸಿದ್ದರಾಮಯ್ಯನವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜೈ ಎಂದು ಜೈಕಾರ ಕೂಗಿದರು.
ಸಿದ್ದರಾಮಯ್ಯನವರು ದಾವಣಗೆರೆಗೆ ತೆರಳುತ್ತಿರುವ ವಿಚಾರ ತಿಳಿದ ಅಭಿಮಾನಿಗಳು ಹೆದ್ದಾರಿಯ ಮಧ್ಯೆದಲ್ಲಿ ಕಾದು ನಿಂತು ಅವರು ಆಗಮಿಸುತ್ತಿದ್ದಂತೆ ಪುಷ್ಪಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿ ಗೌರವಿಸಿದರು.