
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨:ಬಿಜೆಪಿಯವರು ೪೫ ಶಾಸಕರು ಬೇಡ, ೪ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್‌ಖರ್ಗೆ ಸವಾಲು ಹಾಕಿದ್ದಾರೆ.ಕಾಂಗ್ರೆಸ್‌ನ ೪೫ ಶಾಸಕರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಮುಖಂಡ ಸಂತೋಷ್ ಹೇಳಿಕೆಗೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ಖರ್ಗೆ ಅವರು ೪೫ದಲ್ಲ ೪ ಜನ ಶಾಸಕರನ್ನು ಕರೆದೊಯ್ಯಲಿ ನೋಡೋಣ ಎಂದು ಸವಾಲು ಹಾಕಿ ಒಂದು ದಿನವಲ್ಲ ೧ ತಿಂಗಳು ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ ಎಂದು ಬಿ.ಎಲ್ ಸಂತೋಷ್‌ರವರಿಗೆ ಸವಾಲು ಹಾಕಿದ್ದಾರೆ.
ಇದೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಸವಾಲು ಒಂದು ವಾರದಲ್ಲಿ ಬಿಜೆಪಿಯವರು ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಲಿ ಎಂದು ಅವರು ಟ್ವೀಟ್‌ನಲ್ಲಿ ಹೇಳಿ ಈ ಸವಾಲನ್ನು ಸ್ವೀಕರಿಸುವ ಧಮ್ಮು ತಾಖತ್ತು ಇದೆಯೇ ಎಂದು ಪ್ರಶ್ನಿಸಿದ್ದಾರೆ.ಬಿಜೆಪಿ ನಾಯಕ ಬಿ.ಎಲ್ ಸಂತೋಷ್ ಮೊದಲು ಅವರ ಪಕ್ಷದ ಶಾಸಕರು ಮತ್ತು ಸಂಸದರನ್ನು ಹಿಡಿದಿಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಪಕ್ಷದ ಶಾಸಕರ ಬಗ್ಗೆ ಮಾತನಾಡಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.ಆರ್‌ಎಸ್‌ಎಸ್ ಯಾವ ಪಕ್ಷದ ಜತೆ ಇಲ್ಲ ಎಂದು ಹೇಳುತ್ತಾರೆ. ಆದರೆ, ಬಿಜೆಪಿಗೆ ಹೋಗಿ ಶಾಸಕರಿಗೆ ಪಾಠ ಮಾಡುತ್ತಾರೆ ಎಂದು ವ್ಯಂಗ್ಯವಾಡಿರುವ ಪ್ರಿಯಾಂಕ್‌ಖರ್ಗೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವು ಲಿಂಗಾಯತ ನಾಯಕರಿಗೆ ಬಿಜೆಪಿಯವರು ಚುನಾವಣಾ ಟಿಕೆಟ್ ನೀಡಲಿಲ್ಲ. ಮೊದಲು ಬಿ.ಎಲ್ ಸಂತೋಷ್ ಇದಕ್ಕೆಲ್ಲ ಉತ್ತರ ನೀಡಲಿ, ನಂತರ ಕಾಂಗ್ರೆಸ್ ಬಗ್ಗೆ ಮಾತನಾಡಲಿ ಎಂದರು.