ಸಂತೇಮರಹಳ್ಳಿ ವಿವಾದಿತ ಸರ್ಕಾರಿ ಜಾಗದಲ್ಲಿ ಮಳಿಗೆಗಳ ನಿರ್ಮಾಣ

ಚಾಮರಾಜನಗರ, ನ. 18- ತಾಲೂಕಿನ ಸಂತೇಮರಹಳ್ಳಿ ಗ್ರಾಸರ್ಕಲ್‍ನಲ್ಲಿರುವ ಜಾಗವು ತಾಲೂಕು ಪಂಚಾಯಿತಿಗೆ ಸೇರಿದ್ದಾಗಿದೆ. ಈ ಜಾಗದಲ್ಲಿ ಎಂ.ಪಿ ತಮ್ಮಣ್ಣ ಮತ್ತು ಸಹೋದರರು ಮಳಿಗೆಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದು, ಇದರ ಉದ್ಘಾಟನೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಆಗಮಿಸಬಾರದು ಎಂದು ವಿವಿಧ ಸಂಘಟನೆಗಳು ಮುಖಂಡರು ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಟಿ ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಬೈರಾಲಿಂಗಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಮಲ್ಲು ಅವರು ಮಾತನಾಡಿ, ಸಂತೇಮರಹಳ್ಳಿ ಹೋಬಳಿ ಕೇಂದ್ರವಾಗಿದ್ದು, 60 ವರ್ಷಗಳ ಹಿಂದೆಯೇ ಸಂತೇಮರಹಳ್ಳೀಯ ಬಸಮ್ಮ ಎಂಬುವರು ತಾಲೂಕು ಪಂಚಾಯಿತಿಗೆ ದಾನವಾಗಿ ನೀಡಿದ್ದರು. ಈ ಸ್ಥಳದಲ್ಲಿ ಬಸ್ ನಿಲ್ದಾಣ, ಮಳಿಗೆಗಳು, ಗ್ರಾಮಕ್ಕೆ ಕುಡಿಯುವ ನೀರು ಪೊರೈಕೆ ಮಾಡುವ ಓವರ್ ಹೆಡ್ ಟ್ಯಾಂಕ್ ಸೇರಿದಂತೆ ಬಸ್ ನಿಲುಗಡೆಯಾಗಲು ಜಾಗವನ್ನು ಮೀಸಲಿಸಲಾಗಿತ್ತು.
ಸುಮಾರು 2006 ರವರೆಗೂ ಈ 13 ಗುಂಟೆ ಜಮೀನು ತಾಲೂಕು ಪಂಚಾಯಿತಿ ಅಧೀನದಲ್ಲಿತ್ತು ಮಳಿಗೆಯನ್ನು ಟೆಂಡರ್ ಮೂಲಕ ಹರಾಜು ಮಾಡಿಕೊಡುತ್ತಿರುವ ದಾಖಲಾತಿಗಳು ನಮ್ಮ ಬಳಿ ಇವೆ. ಅಲ್ಲದೇ ಇದೇ ಗ್ರಾ.ಪಂ. ಅಧ್ಯಕ್ಷ ಶಂಕರಪ್ಪ ಅವರು ಹರಾಜಿನಲ್ಲಿ ಭಾಗವಹಿಸಿ ಮಳಿಗೆ ಪಡೆದು ಹೋಟೆಲ್ ಮಾಡುತ್ತಿದ್ದರು ಎಂದು ಸಾಕ್ಷಿ ಸಮೇತ ದಾಖಲಾತಿಗಳನ್ನು ಪ್ರದರ್ಶನ ಮಾಡಿದರು.
ಬಸಮ್ಮ ಎಂಬ ಹೆಸರಿನ 153ನೇ ಸರ್ವೆ ನಂಬರ್‍ನಲ್ಲಿ ಈ ಜಾಗವನ್ನು ಗ್ರಾ.ಪಂ. ಸದಸ್ಯರು ಹಾಗೂ ಅಧ್ಯಕ್ಷರಾದ ಬಳಿಕ ಶಂಕರಪ್ಪ ಬಸಪ್ಪ ಎಂದು ತಿದ್ದುಪಡಿ ಮಾಡಿ ಪೋರ್ಜರಿ ದಾಖಲಾತಿಗಳನ್ನು ನೀಡಿ, ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡು ರಾತ್ರೋರಾತ್ರಿ ಶಿಥಿಲಗೊಂಡಿದ್ದ ಬಸ್ ನಿಲ್ದಾಣ ಹಾಗೂ ಮಳಿಗೆಯನ್ನು ನೆಲ ಸಮ ಮಾಡಿದ್ದರು. ಈ ಬಗ್ಗೆ ಅಂದಿನಿಂದಲು ನಮ್ಮ ಹೋರಾಟ ನಡೆಯುತ್ತಿದ್ದು, ಸಂಬಂಧಪಟ್ಟ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿದ್ದೇವೆ. ಆದರೆ ಗ್ರಾ.ಪಂ. ಅಧ್ಯಕ್ಷರಾಗಿರುವ ಎಂ.ಪಿ. ಶಂಕರಪ್ಪ, ಸಹೋದರರಾದ ಎಂ.ಪಿ. ಬಸವಣ್ಣ, ಎಂ.ಪಿ. ರಾಜು, ಎಂ.ಪಿ. ತಮ್ಮಣ್ಣ, ಎಂ.ಪಿ. ರೇವÀಣ್ಣ, ಹಾಗೂ ಎಂ.ಪಿ. ಮಾದಪ್ಪ ಅವರು ದಬ್ಬಾಳಿಕೆ ಮತ್ತು ರಾಜಕೀಯ ಪ್ರಭಾವನ್ನು ಬಳಸಿಕೊಂಡು ಸರ್ಕಾರಿ ಜಾಗವನ್ನು ವಶಪಡಿಸಿಕೊಂಡು ಈ ಮಳಿಗೆಗಳನ್ನು ನಿರ್ಮಾಣ ಮಾಡಿ, ಲಕ್ಷಾಂತರರ ರೂ. ಲೂಟಿ ಮಾಡುತ್ತಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಲೋಕಾಯುಕ್ತರಿಗೂ ಸಹ ದೂರು ನೀಡಿದ್ದೇವೆ ಎಂದರು.
ಹೀಗಾಗಿ ತರಾತುರಿಯಲ್ಲಿ ನಿರ್ಮಾಣ ಮಾಡಿರುವ ಈ ಮಳಿಗೆಗಳ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದ ಉದ್ಘಾಟಿಸುವ ಕಾರ್ಯಕ್ರಮವನ್ನು ನ. 20 ರಂದು ಹಮ್ಮಿಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಸಜ್ಜನ ರಾಜಕಾರಣಿ ದಿ. ನಿಜಲಿಂಗಪ್ಪ ಅವರು ಅಮೃತ ಹಸ್ತದಿಂದ ಉದ್ಘಾಟನೆ ಮಾಡಿದ್ದ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ, ಈಗ ರಾಜ್ಯ ಮುಖಂಡರಾದ ನಿಮ್ಮಂಥ ಯುವ ರಾಜಕಾರಣಿಗಳಿಂದ ವಿವಾದಿತ ಖಾಸಗಿ ಮಳಿಗೆಯನ್ನು ಉದ್ಘಾಟಿಸಲು ಆಹ್ವಾನಿಸುವ ಮೂಲಕ ತಾಲೂಕಿನ ಜನರಿಗೆ ಯಾವ ಸಂದೇಶವನ್ನು ನೀಡಲು ಹೊರಟಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಜಾಗದಲ್ಲಿ ಬಸ್ ನಿಲ್ದಾಣ ಇತ್ತು ಎಂಬುವುದು ಜಗಜಾಹೀರಾಗಿದ್ದು, ಅಲ್ಲದೇ ಬಸಮ್ಮ ಅವರು ದಾನ ಮಾಡಿರುವ ಪತ್ರವು ಇದೆ. ಅವರ ಮೊಮ್ಮಕ್ಕಳಾದ ಶಿವಮಲ್ಲಪ್ಪ ಅವರು ನಮ್ಮ ಅಜ್ಜಿ ಬಸಮ್ಮ ಅವರೇ ಈ ಜಾಗವನ್ನು ದಾನ ಮಾಡಿರುವ ಬಗ್ಗೆ ಜಿಲ್ಲಾಡಳಿತಕ್ಕೆ ದಾಖಲಾತಿಗಳನ್ನು ಹಾಜರು ಪಡಿಸಿದ್ದಾರೆ. ಅಂದು ಇದ್ದ ತಾಲ್ಲುಕು ಮಟ್ಟದ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಲೋಪ ಮತ್ತು ಬೇಜವಾಬ್ದಾರಿ ತನದಿಂದ ಹೃದಯ ಭಾಗದಲ್ಲಿದ್ದ ಸರ್ಕಾರಿ ಜಾಗವು ಖಾಸಗಿ ವ್ಯಕ್ತಿಯ ಪಾಲಾಗಿದೆ. ಇದರ ಬಗ್ಗೆ ಧ್ವನಿಯಾತ್ತ ಬೇಕಾದ ರಾಜಕಾರಣಿಗಳೇ ಕುಮ್ಮಕ್ಕು ನೀಡುವುದು ಯಾವ ನ್ಯಾಯ ಲೋಕಾಯುಕ್ತರು ತನಿಖೆ ಮಾಡಿದ್ದು, ಸದ್ಯದಲ್ಲಿಯೇ ವರದಿಯನ್ನು ಸಹ ಸರ್ಕಾರಕ್ಕೆ ನೀಡಲಿದ್ದಾರೆ ಎಂದು ಮುಖಂಡರಾದ ಬೈರಾಲಿಂಗಸ್ವಾಮಿ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಬಿಎಸ್ಪಿ ತಾಲೂಕು ಸಂಯೋಜಕ ಎಸ್.ಪಿ. ಮಹೇಶ್, ಕಸ್ತೂರಿ ಕರ್ನಟಕ ಜನಪರ ವೇದಿಕೆಯ ಪುಟ್ಟರಾಜು, ರಂಗಸ್ವಾಮಿ, ಸಂತೇಮರಹಳ್ಳಿ ಶಿವಮಲ್ಲಪ್ಪ ಇತರರು ಇದ್ದರು.