ಸಂತೆಯಲ್ಲಿ ಮಾಸ್ಕ್ ಮರೆತ ಜನರಿಗೆ ದಂಡ ಹಾಕಿದ ಪ.ಪಂ ಅಧಿಕಾರಿಗಳು

ಆಲಮೇಲ:ಎ.17:ದೇಶದಲ್ಲಿ ಕರೋನಾ ಮಹಾಮಾರಿಯ 2ನೇ ಅಲೆಯಿಂದ ಜನರು ತತ್ತರಿಸಿದ್ದು ಜನರ ಆರೋಗ್ಯವೇ ಮುಖ್ಯ ಎಂದು ಸರಕಾರ ಹಲವಾರು ಮಾರ್ಗಸೂಚಿಗಳನ್ನು ಜಾರಿಗೆ ತಂದರೆ ಅದನ್ನು ಸರಿಯಾಗಿ ಜನರು ಪಾಲಿಸದೆ ಇರುವುದರಿಂದ ಈಗ ಅನಿವಾರ್ಯವಾಗಿ ದಂಡ ಹಾಕಿ ಅರಿವು ಮೂಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಶುಕ್ರವಾರ ವಾರದ ಸಂತೆ ಇರುವುದರಿಂದ ಮಾಸ್ಕ್ ಮರೆತ ಜನರನ್ನು ಪಟ್ಟಣ ಪಂಚಾಯತ ಅಧಿಕಾರಿಗಳು ದಂಡ ಹಾಕಿದ ಘಟನೆ ಜರುಗಿತು.
ಶುಕ್ರವಾರ ವಾರದ ಸಂತೆ ಇರುವುದರಿಂದ ಸುತ್ತಲಿನ ಹಳ್ಳಿಗಳಿಂದ ನೂರಾರು ಜನರು ಸಂತೆ ಬರುವರು, ಹಾಗೇ ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದ ವ್ಯಾಪಾರಸ್ಥರು ಬರುತ್ತಾರೆ ಸಂತೆಯಲ್ಲಿ ಯಾವುದೇ ರೀತಿಯ ಸಾಮಾಜಿಕ ಅಂತರವಿಲ್ಲ ಮತ್ತು ಮಾಸ್ಕ್ ಧರಿಸದೇ ಜನರು ಮನಬಂದಂತೆ ಸುತ್ತಾಡುತ್ತಿದ್ದರೂ ಇದನ್ನು ಗಮನಿಸಿದ ಸ್ಥಳೀಯ ಪಟ್ಟಣ ಪಂಚಾಯತ ಅಧಿಕಾರಿಗಳು ದಂಡ ಹಾಕಲು ಶುರು ಮಾಡಿದ್ದರು.
ಜನ ಮೈ ಮರೆಯುತ್ತಾರೆ ಎಂದು ಮನಗಂಡ ಅಧಿಕಾರಿಗಳು ಕಳೆದ ಹಲವು ದಿನಗಳಿಂದ ಪಟ್ಟಣದಲ್ಲಿ ವಾಹನದಲ್ಲಿ ಧ್ವನಿವರ್ಧಕವನ್ನು ಅಳವಡಿಸಿ ಕರೋನಾ ಜಾಗೃತಿಯನ್ನು ಮೂಡಿಸಿದ್ದಾರೆ.ಜನ ಕ್ಯಾರೆ ಎನ್ನದಿದ್ದಾಗ ದಂಡ ಹಾಕುವುದು ಅನಿವಾರ್ಯವಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ನಿರೀಕ್ಷಕ ಬಿ. ಜಿ.ನಾರಾಯಣಕರ ಜನರು ಕರೋನಾ ಮಹಾಮಾರಿಯಿಂದ ಎಚ್ಚರಿಕೆ ಇರಬೇಕು, ಇಡೀ ದೇಶವೇ ಕರೋನಕ್ಕೆ ಹೆದರಿದೆ, ಮಹಾಮಾರಿಯಿಂದ ದೂರ ಇರಬೇಕಾದರೆ ಎಲ್ಲರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದಕೊಳ್ಳುವ ಜತೆಗೆ ಎಲ್ಲರೂ ಕೊವೀಡ್ ಲಸಿಕೆ ಹಾಕಿಸಿಕೊಳ್ಳಬೇಕು, ನಾವು ಜನರಿಗೆ ಅರಿವು ಮೂಡಿಸಲು ಹಲವಾರು ದಿನದಿಂದ ಸರಕಾರದ ನಿಯಮದ ಪ್ರಕಾರ ಧ್ವನಿ ವರ್ಧಕದ ಮೂಲಕ ಅರಿವು ಮೂಡಿಸು ಕಾರ್ಯವನ್ನು ಮಾಡಿದ್ದೇವೆ ಆದರೆ ಜನರು, ವ್ಯಾಪಾರಸ್ಥರು ಸರಿಯಾಗಿ ಪಾಲಿಸುತ್ತಿಲ್ಲ ಹೀಗಾಗಿ 100ರೂ ದಂಡ ಹಾಕಿದ್ದೇವೆ, ನಾವು ಮಾಡುವುದು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಮಾತ್ರ ಮಾಡುತ್ತೇವೆ ಸಾರ್ವಜನಿಕ ಆರೋಗ್ಯವೇ ನಮಗೆ ಮುಖ್ಯ ಎಂದು ಹೇಳಿದರು.
ಈ ವೇಳೆ ಸುಮಾರು 30ಕ್ಕೂ ಹೆಚ್ಚು ಜನರಿಗೆ ದಂಡ ಹಾಕಲಾಯಿತು ,ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸಾಥ ನೀಡಿದರು.