
ಸಂಜೆವಾಣಿ ವಾರ್ತೆ
ದಾವಣಗೆರೆ: ಸೆ.6; ಶಾಂತಿ ಮತ್ತು ಸಂತೃಪ್ತಿಯ ಜೀವನ ನಡೆಸಲು ಮತ್ತು ಬದುಕನ್ನು ಕಟ್ಟಿಕೊಳ್ಳಲು ಇದಕ್ಕೆ ಮೂಲ ತಳಹದಿ ಶಿಕ್ಷಣವಾಗಿದೆ. ಈ ನಿಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯುವುದು ಅತೀ ಮುಖ್ಯವಾದದು ಎಂದು ಗಣಿ ಮತ್ತು ಭೂ ವಿಜ್ಞಾನ, ತೊಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.ಅವರು ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಡಾ; ಸರ್ವಪಲ್ಲಿ ರಾಧಾಕೃಷ್ಣನ್ ರವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಶಿಕ್ಷಕರ ದಿನಾಚರಣೆ, ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಹಾಗೂ ದಾವಣಗೆರೆ ಉತ್ತರ, ದಕ್ಷಿಣ ವಲಯದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಡಾ; ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂತೋಷ ಮತ್ತು ಸಂತೃಪ್ತಿಯ ಜೀವನ ಸಾಧ್ಯವಾಗಲು ಇದಕ್ಕೆ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿರಬೇಕೆಂದು ಹೇಳಿದವರು ಡಾ; ಸರ್ವಪಲ್ಲಿ ರಾಧಾಕೃಷ್ಣನ್‍ರವರು. ಇವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ಶಿಕ್ಷಣ ಕೊಟ್ಟಂತಹ ಗುರುವೃಂದಕ್ಕೆ ನಮಿಸುವ ದಿನ ಇದಾಗಿದೆ. ಆದರ್ಶ ಶಿಕ್ಷಕರಾದ ಇವರು ತಮ್ಮ ಸಾಧನೆಯ ಮೂಲಕ ಹಲವು ಹುದ್ದೆಗಳನ್ನೇರಿದರು. ಇವರ ಕೊಡುಗೆ ಎಲ್ಲರಿಗೂ ಮಾದರಿಯಾಗಿದ್ದು ಅವರ ತತ್ವ, ಸಿದ್ದಾಂತಗಳನ್ನು ವಿದ್ಯಾರ್ಥಿ ಜೀವನ, ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ತಂದುಕೊಡಬೇಕಾಗಿದೆ. ಅವರ ಜನ್ಮ ದಿನಾಚರಣೆಯನ್ನು 1962 ರ ಸೆಪ್ಟೆಂಬರ್ 5 ರಿಂದ ಆಚರಿಸುತ್ತಾ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.ಸಮಾಜ, ದೇಶ ಕಟ್ಟುವಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿರುತ್ತದೆ. ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಉದಾಸೀನ ಮಾಡಿದರೆ ಇಡೀ ಸಮಾಜ ಮತ್ತು ದೇಶ ಹಾಳಾಗುತ್ತದೆ. ಇದನ್ನು ಅರಿತರೆ ಶಿಕ್ಷಕರ ಕರ್ತವ್ಯ ಎಷ್ಟು ಮೌಲ್ಯಯುತವಾಗಿರುತ್ತದೆ ಎಂಬುದು ತಿಳಿಯುತ್ತದೆ. ಆದ್ದರಿಂದ ಶಿಕ್ಷಕರು ಸದಾ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕಾಗಿದೆ ಎಂದರು.ದಾವಣಗೆರೆ ಜಿಲ್ಲೆಯಲ್ಲಿನ ಶಿಕ್ಷಕರು ಸಾಕಷ್ಟು ಅತ್ಯುತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. 2001 ರಲ್ಲಿ ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ 3 ನೇ ಸ್ಥಾನಕ್ಕೇರಿತ್ತು, ನಂತರದಲ್ಲಿ ಇದು ಕುಸಿತವಾಯಿತು. ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮಿಸಿದ ಶಿಕ್ಷಕರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಶಿಕ್ಷಕರು ತಮ್ಮ ಮನಸು ಇಚ್ಚೆಯಂತೆ ಪಾಠ ಮಾಡಲು ಮುಂದೆ ಬರಬೇಕು, ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಾವು ಬದ್ದವಾಗಿದ್ದೇವೆ. ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತಾಗಿ ಇತರೆ ಒತ್ತಡಗಳು ಕಡಿಮೆ, ಶಿಕ್ಷಕರು ಶೈಕ್ಷಣಿಕ ಯೋಜನೆಗಳ ಬಗ್ಗೆ ಚಿಂತನೆ ನಡೆಸುವರು. ಜಿಲ್ಲೆಯ ಎಲ್ಲಾ ಶಿಕ್ಷಕರು ಒಳ್ಳೆಯ ಕೆಲಸವನ್ನು ಮಾಡುವ ಮೂಲಕ ಜಿಲ್ಲೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಶ್ರಮಿಸಬೇಕು ಎಂದರು