ಸಂತಾನ ನಿಯಂತ್ರಣ ವಿಷಯದಲ್ಲಿ ಮಹಿಳೆಯರಷ್ಟೇ ಪುರುಷರ ಪಾತ್ರವೂ ಮುಖ್ಯ ಃ ಡಾ.ರಾಜೇಶ್ವರಿ ಗೊಲಗೇರಿ

ವಿಜಯಪುರ, ಡಿ.4-ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಮುಖವಾಗಿದೆ. ಸಂತಾನ ನಿಯಂತ್ರಣ ವಿಷಯದಲ್ಲಿ ಮಹಿಳೆಯರ ಪಾತ್ರವೇ ಇಲ್ಲಿಯವರೆಗೆ ಪ್ರಧಾನವಾಗಿತ್ತು. ಪುರುಷರೂ ಹೆಚ್ಚು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ರಾಜೇಶ್ವರಿ ಗೊಲಗೇರಿ ಅವರು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪಾಕ್ಷಿಕ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅದರಂತೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳಾದ ಡಾ|| ಮಹೇಶ ನಾಗರಬೆಟ್ಟ ಅವರು ಮಾತನಾಡಿ ಪುರುಷ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೇವಲ 5-10 ನಿಮಿಷದಲ್ಲಿ ಮುಗಿಯುತ್ತದೆ. ಶಸ್ತ್ರ ಚಿಕಿತ್ಸೆ ಮುಗಿದ ಅರ್ಧ ಗಂಟೆಯಲ್ಲಿ ವ್ಯಕ್ತಿಯು ಮನೆಗೆ ಸಾಮಾನ್ಯರಂತೆ ತೆರಳಬಹುದು. ಯಾವುದೇ ರೀತಿಯ ಲೈಂಗಿಕ ನಿಶ್ಯಕ್ತಿ ಉಂಟಾಗುವುದಿಲ್ಲ. ಮೊದಲಿನಂತೆಯೇ ಎಲ್ಲ ಕೆಲಸಗಳನ್ನು ಮಾಡಬಹುದು.
ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ. ಶಸ್ತ್ರ ಚಿಕಿತ್ಸೆಗೆ ಒಳಪಟ್ಟರೆ ತಮ್ಮ ದೈಹಿಕ ಶಕ್ತಿ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಪುರುಷರಲ್ಲಿದೆ. ಆದರೆ ಯಾವುದೇ ರೀತಿಯ ನಿಶ್ಯಕ್ತಿ ಉಂಟಾಗುವುದಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಗಂಗಪ್ಪಾ ಎಮ್ ಕೋಲೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್ ಎಮ್ ಹಂಚಿನಾಳ, ಶ್ರೀಮತಿ ಎಮ್ ಬಿ ಹುಲ್ಲೂರ, ಆರ್ ಪಿ ಹೊಸಮನಿ, ಕುಮಾರ ರಾಠೋಡ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.