ಸಂತಪೂರ ಆಸ್ಪತ್ರೆಗೆ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ

ಬೀದರ್: ನ.15:ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ನವೆಂಬರ್ 14ರಂದು ಸಂತಪೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆ ಹಾಜರಿ ಪುಸ್ತಕವನ್ನು ಪಡೆದು ಕರ್ತವ್ಯ ನಿರತ ವೈದ್ಯರ ಹಾಜರಿಯನ್ನು ಪರಿಶೀಲಿಸಿದರು. ಈ ವೇಳೆ ಕೆಲವು ವೈದ್ಯರು ಮತ್ತು ಸಿಬ್ಬಂದಿಯ ಹಾಜರಾತಿ ಮಾಹಿತಿ ನಮೂದಿಸದೇ ಇರುವುದನ್ನು ಗಮನಿಸಿದ ಸಚಿವರು ಬೇಸರ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಆಗಮಿಸಿ ಹಾಜರಿ ಪುಸ್ತಕದಲ್ಲಿ ಸಹಿ ಮಾಡದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಪ್ರತಿದಿನ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹಾಗೂ ನೀಡಲಾದ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಆಸ್ಪತ್ರೆಗೆ ಆಗಮಿಸಿದ ರೋಗಿಗಳಿಗೆ ಮಾತನಾಡಿಸಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿದ್ದು, ರೋಗಿಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು. ಚಿಕಿತ್ಸಾ ಸಾಮಗ್ರಿ ಹಾಗೂ ಔಷಧದ ಕೊರತೆಯಾದಲ್ಲಿ ತಕ್ಷಣ ತರಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸ್ಪತ್ರೆಗೆ ಬರುವ ರೋಗಿಗಳು ಯಾವುದೇ ಕಾರಣಕ್ಕೂ ಸಮಸ್ಯೆ ಅನುಭವಿಸಬಾರದು. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದರೂ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವುದು, ರೋಗಿಗಳಿಗೆ ಸ್ಪಂದಿಸದಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವೈದ್ಯರಿಗೆ ನೋಟಿಸ್: ಆಸ್ಪತ್ರೆಗೆ ಭೇಟಿ ನೀಡಿದಾಗ ಸಾರ್ವಜನಿಕರು, ಕೆಲವು ವೈದ್ಯರು ಆಸ್ಪತ್ರೆಗೆ ಪ್ರತಿದಿನ ಬರುವುದಿಲ್ಲ. ರೋಗಿಗಳಿಗೆ ಸರಿಯಾಗಿ ತಪಾಸಣೆ ಮಾಡುವುದಿಲ್ಲ. ರೋಗಿಗಳಿಗೆ ಸ್ಪಂದಿಸುವುದಿಲ್ಲ. ವೈದ್ಯರು ಕೆಲಸದ ಅವಧಿಯಲ್ಲಿ ವಸತಿ ಗೃಹದಲ್ಲಿ ತಪಾಸಣೆ ಮಾಡುತ್ತಿದ್ದಾರೆ ಎನ್ನುವ ದೂರುಗಳನ್ನು ಸಚಿವರಿಗೆ ಸಲ್ಲಿಸಿದರು. ಕರ್ತವ್ಯಕ್ಕೆ ಹಾಜರಾಗದ ಮತ್ತು ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ವೈದ್ಯರಾದ ಡಾ.ಸೈಯದ ವಾಕಸ ಹಾಗೂ ಮತ್ತಿತರರಿಗೆ ನೋಟಿಸ್ ನೀಡುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿದರು.