ಸಂಡೇ ಲಾಕ್‍ಡೌನ್ ತೆರವು : ನಗರದಲ್ಲಿ ಮಿಶ್ರ ಪ್ರತಿಕ್ರಿಯೆ

ಮೈಸೂರು. ಆ.2- ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಸಂಡೇ ಲಾಕ್‍ಡೌನ್‍ ತೆರವುಗೊಂಡಿದ್ದರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಡೇ ಲಾಕ್‍ಡೌನ್ ತೆರವಿಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದೇಶದೆಲ್ಲೆಡೆ ಅನ್‍ ಲಾಕ್‍ 3.0 ಹಿನ್ನೆಲೆಯಲ್ಲಿ ಭಾನುವಾರದಂದು ವಿಧಿಸಿದ್ದ ಲಾಕ್‍ ಡೌನ್‍ ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಭಾನುವಾರ ವ್ಯಾಪಾರ-ವಹಿವಾಟು ಜೋರಾಗಿತ್ತು. ನಗರದ ದೇವರಾಜ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ದಿನಬಳಕೆ ವಸ್ತುಗಳ ಖರೀದಿಗೆ ಆಗಮಿಸುತ್ತಿದ್ದಾರೆ.
ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿದ್ದು, ಜನಜೀವನ ಸಹಜವಾಗಿದೆ. ಲಾಕ್ ಡೌನ್ ನಿರ್ಬಂಧ ತೆರವುಗೊಂಡಿರುವ ಹಿನ್ನೆಲೆ ನಗರದಲ್ಲಿ ಸಾರಿಗೆ ಬಸ್‍ಗಳ ಜತೆಗೆ ಆಟೋ, ಕ್ಯಾಬ್ ಗಳು ರಸ್ತೆಗಿಳಿದಿವೆ. ಆದರೆ ನಗರ ಸಾರಿಗೆ ಬಸ್‍ಗಳ ಸಂಚಾರ ಎಂದಿನಂತಿದ್ದರೂ, ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿದೆ. ಲಾಕ್ ಡೌನ್ ತೆರವುಗೊಂಡಿದ್ದರೂ, ಸಾರಿಗೆ ಬಸ್‍ ಬಳಕೆಗೆ ಪ್ರಯಾಣಿಕರು ಒಲವು ತೋರದ ಪರಿಣಾಮ ನಗರ ಬಸ್ ನಿಲ್ದಾಣ ಖಾಲಿ ಹೊಡೆಯುತ್ತಿತ್ತು.
ಮತ್ತೊಂದೆಡೆ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ರಿಲೀಫ್ ಮಾಡಿದ್ದರೂ, ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಿದ್ದಾರೆ. ಪ್ರಮುಖವಾಗಿ ನಗರದ ಸಂತೆ ಪೇಟೆ ರಸ್ತೆಯ ಅಂಗಡಿಗಳು ಬಂದ್ ಮಾಡಲಾಗಿದೆ. ಜತೆಗೆ ನಗರದ ಬಹುತೇಕ ಬಡಾವಣೆಗಳಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದ್ದು, ಚಿಲ್ಲರೆ ಅಂಗಡಿಗಳು, ಮೆಡಿಕಲ್ ಸ್ಟೋರ್ಸ್‍ ಹೊರತುಪಡಿಸಿ ಇತರೆ ಅಂಗಡಿಗಳ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‍ ಮಾಡಿದ್ದಾರೆ. ಮತ್ತೊಂದೆಡೆ ಸಂಡೇ ಲಾಕ್‍ ಡೌನ್ ತೆರವುಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದರೂ, ನಗರದ ಕೆಲವು ಕಡೆಗಳಲ್ಲಿ ಭಾನುವಾರ ಲಾಕ್ ಡೌನ್‌ ಮುಂದುವರೆಯಲಿದೆ ಎಂದು ಪೊಲೀಸರು ಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.