ಸಂಡೂರು- ಸಂಭ್ರಮದಿಂದ ಹೋಳಿ ಹಬ್ಬದ ಆಚರಣೆ

ಸಂಡೂರು :ಮಾ: 30: ಹೋಳಿಹುಣ್ಣಿಮೆಯ ಅಂಗವಾಗಿ ಬೆಳಗಿನಿಂದಲೇ ಮಕ್ಕಳು ಬಾಟಲಿಗಳಲ್ಲಿ ಬಣ್ಣದ ನೀರನ್ನು ಹಾಕಿಕೊಂಡು ಒಬ್ಬರಿಗೊಬ್ಬರೂ ಓಡೋಡೊ ಬಣ್ಣ ಎರಚಿಕೊಂಡರು, ಇದಕ್ಕೆ ಪೋಷಕರು ವಿರೋಧಿಸಿದರೂ ಸಹ ಮಕ್ಕಳು ಅಂಗಳಕ್ಕೆ ಇಳಿದು ಸಂತಸ ಪಟ್ಟರು.
ಹೋಳಿ ಹುಣ್ಣೆ ಎಂದರೆ ಬೊಬ್ಬೆ ಹಾಕುವವರಿಗೇನು ಕಮ್ಮಿ ಇರಲಿಲ್ಲ, ಇಂದು ಸಹ ಬಣ್ಣದ ಜೊತೆಗೆ ಎಲ್ಲರೂ ಸಹ ಕೇಕೆ ಹಾಕುತ್ತಾ ಬಣ್ಣ ಎರಚಿದರು, ಅಲ್ಲೆ ಹೋಳಿ ಹುಣ್ಣಿಮೆ ಬರುತ್ತಲೇ ಸಂಜೆಯಾಗುತ್ತಲೇ ಯುವಕರು ದಂಡು ಕೆಲ ಮನೆಗಳ ಮುಂದೆ ಹೋಗಿ ಬೋಕಿ ಹಾಕುವುದು, ಅಣಕು ಶವ ಹಾಕಿಬರುವಂತಹ ಚೇಷ್ಠಗಳನ್ನು ಮಾಡುವ ಮೂಲಕ ಹಬ್ಬಕ್ಕೆ ಸಂಭ್ರಮದ ಕಳೆ ಕಟ್ಟಿದರು, ಬೆಳಿಗ್ಗೆ ಮಕ್ಕಳು ಬರೀ ಬಣ್ಣದ ನೀರನ್ನು ಸಿಂಪರಣೆ ಮಾಡಿಕೊಂಡರೆ, ಯುವಕರು ಬೈಕಗಳಲ್ಲಿ ಬಣ್ಣದ ಡಬ್ಬಿಗಳನ್ನೇ ಹಿಡಿ ಓಣಿ ಓಣಿ ಕೇಕೇ ಹಾಕುತ್ತಾ ಬಣ್ಣ ಎರಚುತ್ತಾ ಸಾಗಿದರು, ಕೆಲವರು ವಿರೋಧಿಸಿದರೂ ಸಹ ಅದನ್ನು ಲೆಕ್ಕಿಸದೇ ಸಾಗಿದ್ದು ಕಂಡು ಬಂದಿತ್ತು, ಮತ್ತೆ ಕೆಲ ಯುವಕರ ತಂಡ ಟಾಟಾ ಎಸಿಗಳಲ್ಲಿ ಗುಂಪುಗೂಡಿಕೊಂಡು ಬಣ್ಣ ವನ್ನು ಸಾಮೂಹಿಕವಾಗಿ ಎರಚುತ್ತಾ ಸಾಗಿದ್ದು ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಂಡು ಬಂದಿತು.
ರೈತರ ಬೀದಿಯಾದ ಹೊಸಬಾವಿ, ಮತ್ತು ಹಳ್ಳದ ಓಣಿ ರೈತರು ವಿಶೇಷವಾಗಿ ಬಂಡಿಗಳನ್ನು ಕಟ್ಟಿಕೊಂಡು ಬಣ್ಣವನ್ನು ಡ್ರಮ್‍ಗಳಲ್ಲಿ ಕಲಿಸಿ ಎರಚುತ್ತಾ ಸಾಗಿದರು. ಅಲ್ಲದೆ ಸಾಮೂಹಿಕತೆ ಇದ್ದಕಾರಣ ಯಾರ ವಿರೋಧವೂ ಸಹ ಕಂಡುಬರಲಿಲ್ಲ, ಕಾರಣ ಇಡೀ ಓಣಿಗೆ ಓಣಿಯೇ ಬಣ್ಣ ಎರಚುವಿಕೆಯಲ್ಲಿ ತೊಡಗಿತ್ತು, ಅಲ್ಲದೆ ಕೆಲ ಯುವಕರು ಮೊಟ್ಟೆಗಳನ್ನು ಹೊಡೆದು ಕೊಂಡು ಸಂಭ್ರಮಿಸಿದರು ಒಟ್ಟಾರೆ ಬೆಳಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಣ್ಣ ಎರಚಿ ಸಂಭ್ರಮಿಸಿದರು, ಅಲ್ಲದೆ ಸಂಜೆಯಾಗುತ್ತಲೇ ಪಟ್ಟಣಕ್ಕೆ ಹೊಂದಿಕೊಂಡಿರುವ ಧರ್ಮಾಪುರ ಹತ್ತಿರದ ಶ್ರೀ ಗಂಡಿ ನರಸಿಂಹಸ್ವಾಮಿಯ ಜಾತ್ರೆಗೆ ಇಡೀ ಕುಟುಂಬ ಸಮೇತರಾಗಿ ಬಂಡಿಗಳನ್ನು ಕಟ್ಟಿಕೊಂಡು ಜಾತ್ರೆಯಕಡೆಗೆ ಸಾಗಿದರು. ಅಲ್ಲದೆ ವಿಶೇಷವಾದಪೂಜೆಯನ್ನು ಸಮರ್ಪಿಸುವ ಮೂಲಕ ಹೋಳಿ ಹುಣ್ಣಿಮೆ ಹಬ್ಬವನ್ನು ಭಕ್ತಿಯಿಂದ ಆಚರಿಸಿದರು.
ಬ್ರಾಹ್ಮಣರ ಬೀದಿಯಲ್ಲಿ ಕೆಲ ಭಕ್ತರು ಕಾಮದಹನ ಮಾಡುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿ ಕಾಮದಹನ ಮನಸ್ಸಿನ ಮಲೀನದ ದಹನ ಎನ್ನುವ ಅಂಶವನ್ನು ಸಾರಿದರು. ನಂತರ ಸಂಭ್ರಮದಿಂದ ಬಣ್ಣ ಎರಚಿಕೊಂಡು ಹಬ್ಬ ಆಚರಿಸಿದರು.