ಸಂಡೂರಿನ ಶಿವಪುರ ಈಶ್ವರಸ್ವಾಮಿ ದೇವರ ರಥೋತ್ಸವ


ಸಂಜೆವಾಣಿ ವಾರ್ತೆ
ಸಂಡೂರು :ಫೆ-26 ಭಾರತ ಹುಣ್ಣಿಮೆಯ ದಿನವಾದ ಶನಿವಾರ ಇಲ್ಲಿನ ಶಿವಪುರ ಈಶ್ವರ ದೇವರ ರಥೋತ್ಸವವು ಅಪಾರ ಜನ ಸಾಗರದೊಂದಿಗೆ ವಿಜೃಂಭಣೆಯಿಂದ ಜರುಗಿತು.  ಭರತ ಹುಣ್ಣಿಮೆಯಂದು ಪಟ್ಟಣದಲ್ಲಿ ಎಲ್ಲೆಲ್ಲಿಯೂ ಸಂತಸ ಸಡಗರ ಕಂಡುಬಂದಿತು.  ಇಡೀ ದಿನ ಭಕ್ತರು ಹಬ್ಬದ ತಯಾರಿಯನ್ನು ಮಾಡಿ ಸಂಜೆ ಈಶ್ವರನ ರಥೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಿದರು. 
ಸಂಜೆ ಸರಿಯಾಗಿ 6 ಕ್ಕೆ ರಾಜ ವಂಶಸ್ಥರಾದ ಘೋರ್ಪಡೆ ಕುಟುಂಬದ ಅಜಯ್ ಎಂ ಘೋರ್ಪಡೆ, ಸೂರ್ಯಪ್ರಭ ಅಜಯ್ ಘೋರ್ಪಡೆ, ಬಹಿರ್ಜಿ ಅಜಯ್ ಘೋರ್ಪಡೆ, ವೈಷ್ಣವಿ ಬಹಿರ್ಜಿ ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ ಮತ್ತು ಯೋಗೆಂದ್ರ ಸಾವಂತ್ ಅವರು ಈಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈಶ್ವರನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲು ಚಾಲನೆ ನೀಡಿದರು.  ಮೆರವಣಿಗೆ ನಂತರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು ನಂತರ ಘೋರ್ಪಡೆ ಕುಟುಂಬದವರು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ವಾದ್ಯಮೇಳ ಹಾಗೂ ಭಜನಾ ತಂಡಗಳೊಂದಿಗೆ ರಥೋತ್ಸವ ಜರುಗಿತು. ಜನತೆ ತೇರಿಗೆ ಉತ್ತತ್ತಿ, ಬಾಳೆಹಣ್ಣನ್ನು ಎಸೆದು, ತೇರನ್ನೆಳೆದು ತಮ್ಮ ಭಕ್ತಿಯನ್ನು ಅರ್ಪಿಸಿದರು.ಈ ರಥೋತ್ಸವದಲ್ಲಿ ಸಂಡೂರು, ದೌಲತ್‍ಪುರ, ಧರ್ಮಾಪುರ, ಸುಶೀಲಾನಗರ ಮುಂತಾದ ಗ್ರಾಮಗಳ ಜನತೆ ರಥೋತ್ಸವದಲ್ಲಿ ಭಾಗವಹಿಸಿದ್ದರು.