ಸಂಡೂರಿನಲ್ಲಿ ಮ್ಯಾರಾಥಾನ್ ಓಟ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 6 ಇದೇ ಮೊದಲು ಗ್ರಾಮೀಣ ಭಾಗದ ಯುವಕರಿಗೆ ಮ್ಯಾರಾಥನ್ ಓಟ ಆಯೋಜಿಸಿದ್ದು ಉತ್ತಮ ಪ್ರಯತ್ನ ಎಂದು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ತಿಳಿಸಿದರು.
ಅವರು ಪಟ್ಟಣದ ಕೃಷ್ಣಾನಗರ ಗ್ರಾಮದ ಹೊರ ವಲಯದಲ್ಲಿ ಹಮ್ಮಿಕೊಂಡಿದ್ದ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿ,  ಕ್ರೀಡೆಗಳು ಯುವಕರಿಗೆ ಅತಿ ಅಗತ್ಯವಾಗಿದೆ, ಅದಕ್ಕಾಗಿ ದಿವಾಕರ್ ಅವರು ಕಬ್ಬಡ್ಡಿ ಆಟಗಳನ್ನು ಆಡಿಸಿ ನೂರಾರು ಯುವಕರು ಕ್ರೀಡಾ ಯುವಶಕ್ತಿಯನ್ನು ಪ್ರೋತ್ಸಾಹಿಸುವ ರೀತಿ ಬಹು ವಿಶೇಷವಾದುದು, ಅದೇ ರೀತಿಯ ಮಹಿಳೆಯರಿಗೆ ಉಡಿತುಂಬುವ ಕಾರ್ಯ, ಸಾಮೂಹಿಕವಿವಾಹಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ನಿರಂತರ ಸೇವೆ ಮಾಡುತ್ತಿದ್ದು ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದರು.
ತಾಲೂಕಿನ ಯಶವಂತನಗರ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಮಹಾಸ್ವಾಮಿಗಳು ಮಾತನಾಡಿ ಇಂದು ನಾವು ಅಧುನಿಕತೆಯ ತುತ್ತ ತುದಿಗೆ ಹೋದರೂ ಸಹ ಅದಕ್ಕೆ ಶರೀರವೇ ಕಾರಣ, ಅಂತಹ ಶರೀರಕ್ಕೆ ಯೋಗ್ಯವಾದ ಮ್ಯಾರಾಥಾನ ಓಟ ಹಮ್ಮಿಕೊಳ್ಳುವ ಮೂಲಕ ಎಲ್ಲಾ ರೀತಿಯ ಸಾಧನೆಗೆ ಸಹಕಾರಿಯಾಗಿದೆ, ಕ್ರೀಡಾಕೂಟಗಳು ಹೆಚ್ಚು ನಡೆಸಿದಾಗ ಯುವಕರು ದುಶ್ಚಟಗಳಿಂದ ದೂರವಾಗಲು ಸಾಧ್ಯವಾಗುತ್ತದೆ, ಇಂತಹ ಸ್ಪರ್ಧೆಗಳು ಹಲವಾರು ಕುಟುಂಬಗಳಿಗೆ ಉತ್ತಮ ಸಹಕಾರಿಯಾದರೆ, ಆರೋಗ್ಯ ವೃದ್ದಿಗೆ ಸಹಕಾರಿಯಾಗುತ್ತದೆ ಎಂದರು.
ಅಯೋಜಕರಾದ ಕೆ.ಎಸ್. ದಿವಾಕರ್ ಅವರು ಮಾತನಾಡಿ ಓಟದಲ್ಲಿ 540 ಕ್ರೀಡಾಪಟುಗಳು ಭಾಗಿಯಾಗಿದ್ದು ಪ್ರಥಮ ಬಹುಮಾನ 10 ಲಕ್ಷ, ದ್ವಿತೀಯ ಬಹುಮಾನ 5 ಜನರಿಗೆ 5 ಲಕ್ಷ, ತೃತೀಯ ಬಹುಮಾನ 50 ಸಾವಿರದಂತೆ 5 ಜನರಿಗೆ ಒಟ್ಟು 16 ಕ್ರೀಡಾಪಟುಗಳಿಗೆ ಬಹುಮಾನಗಳನ್ನು ಕೊಡಲಾಗುತ್ತದೆ, ಅಲ್ಲದೆ ಭಾಗಿಯಾದ ಎಲ್ಲಾ ಮಹಿಳಾ ಓಟಗಾರರಿಗೆ 5 ಸಾವಿರ ಬಹುಮಾನವನ್ನು ಘೋಷಿಸಿದ್ದು, ಮುಂದಿನ ದಿನಗಳಿಗೆ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಲಾಗುವುದು, ಬಸವ ಜಯಂತಿಗೆ ರೈತರಿಗೆ ವಿಶೇಷ ಕಾರ್ಯಕ್ರಮವನ್ನು ಈಗಾಗಲೇ ರೂಪಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಉಸ್ತುವಾರಿ ಅಜಯ್ ಮಂದಾಲ್, ಬಿಜೆಪಿ ಅಧ್ಯಕ್ಷ ಜಿ.ಟಿ. ಪಂಪಾಪತಿ, ಕುಮಾರನಾಯ್ಕೆ, ಪುಷ್ಪಾ. ಅಬ್ದುಲ್ ಮುನಾಫ್, ಅಂಜಿನಪ್ಪ ವಕೀಲರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಎಲ್ಲಾ ಸದಸ್ಯರು, ಬಿಜೆಪಿ ಮುಖಂಡರಾದ ವಾಡಾ ಅಧ್ಯಕ್ಷ ಕರಡಿ ಯರ್ರಿಸ್ವಾಮಿ, ತೊಗರಿ ರಾಜು, ಶೇಖಪ್ಪ, ಅಂಬರೀಷ್, ಕೊಂಚಗೇರಿ ಹರೀಶ್, ಭೀಮಲಿಂಗಪ್ಪ, ಚಂದ್ರಶೇಖರ್ ಲಕ್ಷ್ಮೀ ವೆಂಕಟಸುಬ್ಬಯ್ಯ, ಮಾಳ್ಗಿ ರಾಮಪ್ಪ, ಎಂ. ಪಂಪಾತಿ, ಶೋಭಾ.ಎಂ., ಎಂ. ದೇವೇಂದ್ರಪ್ಪ, ನರಸಿಂಹ, ಶಿವಲಿಂಗಪ್ಪ ಮೇಸ್ತ್ರಿ ನಾರಾಯಣ, ಕಿನ್ನುರೇಶ್ವರ ಇತರರು ಭಾಗವಹಿಸಿದ್ದರು.