ಸಂಜೆ ಸಚಿವರ ಜೊತೆ ಬಿಎಸ್‌ವೈ ಚರ್ಚೆ

ಬೆಂಗಳೂರು,ಏ.೨೨- ಇಂದು ಸಂಜೆ ಸಚಿವರುಗಳ ಸಭೆ ಕರೆದಿರುವ ಮುಖ್ಯಮಂತ್ರಿ ಯಡಿಯೂರಪ್ಪರವರು ಕೊರೊನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿರುವ ಕ್ರಮಗಳನ್ನು ಪರಾಮರ್ಶಿಸಿ ಮುಂದೆ ಅನುಸರಿಸಬೇಕಾದ ಬಿಗಿ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕಳೆದವಾರ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಬಿಗಿಕ್ರಮಗಳನ್ನು ಜಾರಿಗೊಳಿಸಿದೆ ಎಂದರು.
ಪ್ರತಿಯೊಬ್ಬ ಸಚಿವರು vಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಅಲ್ಲಿಯೇ ಕುಳಿತು ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡಿರುವ ನಿಯಮಗಳ ಕಟ್ಟುನಿಟ್ಟಿನ ಪಾಲನೆಯನ್ನು ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಇಂದು ಸಂಜೆ ಸಚಿವ ಸಹೋದ್ಯೋಗಿಗಳ ಸಭೆ ಕರೆದಿದ್ದೇನೆ. ಅಲ್ಲಿ ಎಲ್ಲದರ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.
ಸೋಂಕಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರೂ ಮುಖ್ಯಕಾರ್ಯದರ್ಶಿಗಳು ಮತ್ತು ಸಚಿವರುಗಳ ಜತೆ ನೇರ ಸಂಪರ್ಕ ಹೊಂದಿದ್ದೆ. ಕೊರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನವನ್ನು ಆಸ್ಪತ್ರೆಯಿಂದಲೇ ನೀಡಿದ್ದೆ. ಈಗ ಗುಣಮುಖನಾಘಿ ಆಸ್ಪತ್ರೆಯಿಂದ ಬಂದಿದ್ದೇನೆ. ಸಂಜೆ ಸಚಿವರುಗಳ ಜತೆ ಚರ್ಚೆ ನಡೆಸಿ ಕೊರೊನಾವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಆಗಬೇಕಾಗಿರುವ ಮತ್ತಷ್ಟು ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದರು.
ಜನ ಕೊರೊನಾ ತಡೆಗಟ್ಟಲು ತಾವು ಸಹಕರಿಸಬೇಕು. ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಬಾರದು, ಮನೆಯಲ್ಲೇ ಇದ್ದು ಕೊರೊನಾ ತಡೆಯಲು ಸರ್ಕಾರದ ಜತೆ ಕೈಜೋಡಿಸಿ ಎಂದು ಕೈ ಮುಗಿದು ಪ್ರಾರ್ಥಿಸುವುದಾಗಿಯು ಅವರು ಹೇಳಿದರು.
ರಾಜ್ಯದಲ್ಲಿ ಕೊರೊನಾ ಸ್ಥಿತಿ ಕೆಟ್ಟದಿದೆ. ಹಾಗಾಗಿ, ಜನ ಸಹ ಮಾರ್ಗಸೂಚಿಗಳನ್ನು ಪಾಲಿಸಿ ನಿಯಂತ್ರಣಕ್ಕೆ ನೆರವಾಗಬೇಕು ಎಂದು ಅವರು ಮನವಿ ಮಾಡಿದರು.