ಸಂಜೆ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಚಾಲನೆ

ಬೆಂಗಳೂರು,ಫೆ.೨೯- ದೇಶ ವಿದೇಶಗಳ ಅತ್ತುತ್ತಮ ಚಿತ್ರಗಳ ರಸದೌತಣ ನೀಡಲಿರುವ ೧೫ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದು ಈ ಮೂಲಕ ಸಿನಿಮಾಸಕ್ತರಿಗೆ ಹಬ್ಬವಾಗಿ ಮಾರ್ಪಟ್ಟಿದೆ.
ಇಂದು ಸಂಜೆ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕ ಬಳಿಕ ನಾಳೆಯಿಂದ ಮಾರ್ಚ್ ೭ರ ತನಕ ಚಿತ್ರೋತ್ಸವ ಓರಾಯನ್ ಮಾಲ್, ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಕಲಾವಿದರ ಸಂಘದಲ್ಲಿ ದೇಶ ವಿದೇಶಗಳ ಚಿತ್ರಗಳು ಪ್ರದರ್ಶನ ಕಾಣಲಿವೆ. ಇದರಲ್ಲಿ ಕನ್ನಡದ ಅನೇಕ ಅತ್ತುತ್ತಮ ಚಿತ್ರಗಳಿವೆ.
ಈ ಬಾರಿಯ ಚಿತ್ರೋತ್ಸದ ರಾಯಭಾರಿಯಾಗಿ ಡಾಲಿ ಧನಂಜಯ ಆಯ್ಕೆಯಾಗಿದ್ದಾರೆ. ನವ ನಟಿ ಆರಾಧನಾ ರಾಮ್ ಉದ್ಘಾಟನೆ ಸಮಯದಲ್ಲಿ ದೀಪ ಹಚ್ಚಲು ನೆರವು ನೀಡಲಿದ್ದು ಮುಖ್ಯಮಂತ್ರಿ ಅವರ ಜೊತೆ ಸಂಪುಟದ ಅನೇಕ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ.
ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ ೧೧ ಚಿತ್ರಗಳಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ದಿಷ್ಟ ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ.. ಈ ಆವೃತ್ತಿಯಲ್ಲಿ ತುಳು, ಕೊಡವ, ಬಂಜಾರ, ಅರಬಾಷೆ, ಮಾರ್ಕೋಡಿ, ಗಾಲೆ, ರಾಭ, ಸಂತಾಲಿ, ತಾಯಿಫಾಕ, ಭಾಷೆಗಳ ೯ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಂಗೀತ ಸಂಯೋಜಕ ವಿಜಯಭಾಸ್ಕರ್ ಶತಮಾನೋತ್ಸವ ಸ್ಮರಣೆಯಾಗಿ ಅವರ ಒಂದೆರಡು ಚಲನಚಿತ್ರ ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು. ಸಿನಿಮಾ ಸಂಗೀತಕ್ಕೆ ನೀಡಿದ ಕೊಡುಗೆಯ ಕುರಿತು ವಿಶೇಷ ಪ್ರಸ್ತುತಿ ಇರಲಿದೆ. ಛಾಯಾಗ್ರಾಹಕ ಎನ್ ಜಿ ರಾವ್ ಚಿತ್ರ ಪ್ರದರ್ಶಿಸುವ ಮೂಲಕ ಅವರಿಗೆ ಶತಮಾನೋತ್ಸವದ ಗೌರವ ಸಲ್ಲಿಸಲಾಗುವುದು.
ಕಳೆದ ವರ್ಷ ನಮ್ಮನ್ನು ಅಗಲಿದ ಹೆಸರಾಂತ ತಾರೆ, ನಿರ್ಮಾಪಕಿ ಲೀಲಾವತಿ, ನಿರ್ದೇಶಕರಾದ ಭಗವಾನ್, ಸಿ.ವಿ. ಶಿವಶಂಕರ್ ಮತ್ತು ಗಾಯಕಿ ವಾಣಿ ಜಯರಾಂ ಗೌರವಾರ್ಥ ಚಲನಚಿತ್ರ ಪ್ರದರ್ಶನ ಇದೆ.೧೫ ಗಂಟೆಗಳ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ವಿಭಾಗವು ಮಾನವ ಘನತೆ, ಸಾಮಾಜಿಕ ನ್ಯಾಯ, ಪರಿಸರ ಕಾಳಜಿಗಳು ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಕಾಳಜಿಯ ಚಲನಚಿತ್ರಗಳ ಮೇಲೆ ವಿಶೇಷ ಗಮನವನ್ನು ಹೊಂದಿದೆ.
ಸಿನಿಮಾ ಪ್ರದರ್ಶನದ ಜೊತೆ ಜೊತೆಗೆ ತಜ್ಞರೊಂದಿಗೆ ಸಂವಾದ, ಚರ್ಚೆಯೂ ನಡೆಯಲಿದ್ದು ೭ ದಿನಗಳ ಕಾಲ ಮನರಂಜನೆಯ ರಸದೌತಣ ನೀಡಲು ಚಿತ್ರೋತ್ಸವ ಸಜ್ಜಾಗಿದೆ.
ವಿದೇಶದಿಂದ ಸುಮಾರು ೨೦ ಮಂದಿ ಸೇರಿದಂತೆ ಸುಮಾರು ೭೦ ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾನ್, ಉಜೈಕಿಸ್ತಾನ್, ಜೆಕ್ ರಿಪಬ್ಲಿಕ್, ಇಂಗ್ಲೆಂಡ್ ಬಲ್ಲೇರಿಯಾ, ತೈವಾನ್, ಸ್ಪೇನ್, ಜರ್ಮನಿ ಮತ್ತು ರಷ್ಯಾವನ್ನು ಪ್ರತಿನಿಧಿಗಳು, ಸ್ಥಳೀಯ ಚಲನಚಿತ್ರ ಮತ್ತು ಸಾಂಸ್ಕೃತಿಕ ಮಂದಿ, ಬೆಂಗಳೂರಿನಲ್ಲಿರುವ ವಿದೇಶಿ ಸಂಸ್ಥೆಗಳ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾರೆಲ್ಲಾ ಭಾಗಿ
ಸಿಂಹಾಸನ, ಸಾಮ್ಮಾ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಚಿತ್ರಗಳ ಖ್ಯಾತಿಯ ಡಾ.ಜಬ್ಬಾರ್ ಪಟೇಲ್, ಹಿರಿಯ ನಟ ಶಿವರಾಜ್ ಕುಮಾರ್. ವಿಶಾಲ್ ಭಾರದ್ಮಾಜ್ ನಿರ್ದೇಶನದ “ಖುಫಿಯಾ’ ಚಿತ್ರದಲ್ಲಿ ನಟಿಸಿದ ಬಾಂಗ್ಲಾದೇಶದ ನಟಿ ಅಜಮೇರಿ ಬಂದೋನ್, ಜೆಕ್ ರಿಪಬ್ಲಿಕ್‌ನ ಚಲನಚಿತ್ರ ಶಿಕ್ಷಣ ತಜ್ಞ, ವಿಮರ್ಶಕಿ ವಿಯರಾ ಲ್ಯಾಂಗರೊವಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಉದ್ಘಾಟನೆಗೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಚಿತ್ರವಾಗಿ ಸ್ವಿಸ್ ಚಲನಚಿತ್ರ, ಪೀಟರ್ ಲೂಸಿ ನಿರ್ದೇಶನದ, ೮೮ ನಿಮಿಷಗಳ ಅವಧಿಯ ’ಬೋಂಜೂರ್ ಸ್ವಿಟ್ಸರ್ಲೆಂಡ್’ ಪ್ರದರ್ಶನವಾಗಲಿದೆ.
೧೮೦ ಚಿತ್ರಗಳ ಪ್ರದರ್ಶನಕ್ಕೆ ಸಜ್ಜು
ಕನ್ನಡ, ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನೆಮಾ, ದೇಶಕೇಂದ್ರಿ, ವಿಮರ್ಶಕರ ವಾರ, ಪುನರ್ವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ, ಹೀಗೆ ವಿವಿಧ ವಿಭಾಗಗಳಲ್ಲಿ ೫೦ ಕ್ಕೂ ಹೆಚ್ಚು ದೇಶಗಳ. ೧೮೦ ಚಲನಚಿತ್ರಗಳು ಈ ಉತ್ಸವದಲ್ಲಿ ಪುದರ್ಶನವಾಗಲಿವೆ.
ಕನ್ನಡ ಚಿತ್ರರಂಗ ೯೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ ೫೦ ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ ೩೦ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಇಂದು ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ೧೫ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭ ನಡೆಯುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಕೈಗೊಂಡಿರುವುದು.