ಸಂಜೆ ಬರಪೀಡಿತ ತಾಲ್ಲೂಕುಗಳ ಘೋಷಣೆ

ಬೆಂಗಳೂರು, ಸೆ. ೪- ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ೧೦೦ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಯಾವೆಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಸಂಜೆ ಘೋಷಣೆ ಮಾಡಲಿದೆ. ಬರ ಪೀಡಿತ ತಾಲ್ಲೂಕುಗಳನ್ನು ನಿರ್ಧರಿಸುವ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಸಂಪುಟದ ಉಪಸಮಿತಿ ಚರ್ಚೆ ನಡೆಸಲಿದ್ದು, ಯಾವೆಲ್ಲಾ ತಾಲ್ಲೂಕುಗಳು ಬರಪೀಡಿತ ಎಂಬುದನ್ನು ಈ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಈ ಸಭೆಯ ನಂತರ ಬರ ಪೀಡಿತ ತಾಲ್ಲೂಕುಗಳ ಹೆಸರುಗಳನ್ನು ಇಂದು ಘೋಷಣೆ ಮಾಡಲಾಗುತ್ತದೆ. ಸಂಜೆ ಹೊತ್ತಿಗೆ ಸರ್ಕಾರ ಬರ ಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ. ಕೇಂದ್ರ ಸರ್ಕಾರದ ಬರ ನಿಗದಿ ಮಾನದಂಡದ ಪ್ರಕಾರವೇ ಬರ ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗುತ್ತಿದ್ದು, ಆ ಮಾನದಂಡದ ಪ್ರಕಾರ ೧೧೩ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಜಿಲ್ಲೆಗಳ ಬೆಳೆ ಸಮೀಕ್ಷೆ ವರದಿ, ಮಳೆ ಕೊರತೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಬರ ಪೀಡಿತ ತಾಲ್ಲೂಕುಗಳ ಘೋಷಣೆಯನ್ನು ಮಾಡಲಾಗುತ್ತದೆ. ಸದ್ಯ ಬರ ಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ಯಾವ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಂಬ ಬಗ್ಗೆಯೂ ಸರ್ಕಾರ ತೀರ್ಮಾನ ಮಾಡುತ್ತದೆ.