ಸಂಜೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಸಿಎಂ

ಬೆಂಗಳೂರು, ನ. ೧೮- ವಿಧಾನಪರಿಷತ್‌ನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರುಗಳು ಇಂದು ಸಂಜೆ ಪ್ರಕಟವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಕೊಪ್ಪಳದಿಂದ ಇಂದು ಆರಂಭವಾಗಿರುವ ಬಿಜೆಪಿಯ ಜನ ಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಿಗೆ ಬಿಟ್ಟು ಉಳಿದ ಕ್ಷೇತ್ರಗಳಿಗೆ ಸಂಭಾವ್ಯರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಹೈಕಮಾಂಡ್ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಲಿದೆ ಎಂದರು.
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜನಸ್ವರಾಜ್ ಯಾತ್ರೆಯನ್ನು ನಡೆಸಿದ್ದೇವೆ. ಇಂದು ಕೊಪ್ಪಳದಲ್ಲಿ ನಾನು ಜನಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಾಲ್ಕು ತಂಡಗಳಲ್ಲಿ ಜನಸ್ವರಾಜ್ ಯಾತ್ರೆ ನಡೆದಿದ್ದು, ಈ ಯಾತ್ರೆ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಪರಿಷತ್ ಚುನಾವಣೆಯ ಪ್ರಚಾರವನ್ನು ನಡೆಸುವುದಾಗಿ ಅವರು ಹೇಳಿದರು.
ವರದಿ ಬಂದ ನಂತರ ಪರಿಹಾರ
ಮಳೆಯಿಂದ ಹಾನಿಗೊಳಗಾಗಿರುವ ಬೆಳೆಗಳಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಬೆಳೆ ಹಾನಿ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಪರಿಹಾರ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.
ಮಹಿಳಾ ಉದ್ಯಮಿಗಳ ಸಂಘ
ರಾಜ್ಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮಹಿಳಾ ಸ್ವಸಹಾಯ ಸಂಘಗಳ ಮಾದರಿಯಲ್ಲಿ ಮಹಿಳಾ ಉದ್ಯಮಿಗಳ ಪ್ರತ್ಯೇಕ ಸಂಘ ತೆರೆಯುವುದಾಗಿಯೂ ಅವರು ಹೇಳಿದರು.
ಆರ್ಥಿಕವಾಗಿ ಮಹಿಳಾ ಉದ್ಯಮಿಗಳಿಗೆ ನೆರವು ನೀಡಲು ಈ ತಂಡಗಳನ್ನು ಆರಂಭಿಸುವುದಾಗಿ ಹೇಳಿದ ಅವರು, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ದೃಷ್ಟಿ ಚೇತನ ಮತ್ತು ವಿಕಲ ಚೇತನ ಮಹಿಳೆಯರಿಗೂ ಉದ್ಯೋಗ ಕೊಡಲು ವಿಶೇಷ ಯೋಜನೆ ರೂಪಿಸುವುದಾಗಿಯೂ ಅವರು ಹೇಳಿದರು.