ಸಂಜೆ ಅಂಬರೀಶ್ ಸ್ಮಾರಕ ಲೋಕಾರ್ಪಣೆ

ಬೆಂಗಳೂರು,ಮಾ.೨೭- ಕೇಂದ್ರದ ಮಾಜಿ ಸಚಿವ, ಕನ್ನಡ ಚಿತ್ರರಂಗದಲ್ಲಿ ಕರ್ಣನೆಂದೇ ಹೆಸರು ಪಡೆದಿದ್ದ ಖ್ಯಾತ ನಟ ದಿ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ಸಂಜೆ ಲೋಕಾರ್ಪಣೆಗೊಳ್ಳಲಿದೆ.ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿಗಳಿಸಿದ್ದ ಹಾಗೂ ಮಾಜಿ ಕೇಂದ್ರ ಮತ್ತು ರಾಜ್ಯ ಸಚಿವರೂ ಆಗಿದ್ದ “ಡಾ. ಅಂಬರೀಶ್ ಸ್ಮಾರಕ”ವನ್ನು ಶ್ರೀ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಿಸಲಾಗಿದೆ.ಸ್ಮಾರಕವನ್ನು ಸರಿ ಸುಮಾರು ೧೨ ಕೋಟಿ ರೂಪಾಯಿ ವೆಚ್ಚದಲ್ಲಿ ೧.೩೪ ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಡಾ. ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದು ಇದು ಮೂರು ಟನ್ ತೂಕವಿದೆ.
ಸಮಾಧಿಯ ಸ್ಥಳದಲ್ಲಿ ೪೩ ಅಡಿ ಎತ್ತರದ ನಮಸ್ತೆ ಆಕಾರದ ರಚನೆ, ಅದರ ಸುತ್ತಲೂ ನೀರಿನ ಕಾರಂಜಿ ನಿರ್ಮಾಣ ಮಾಡಲಾಗಿದೆ. ಸುಂದರ ಹೊರಾಂಗಣ ಉದ್ಯಾನವನ ಸ್ಮಾರಕದಲ್ಲಿ ಮ್ಯೂಸಿಯಂ, ಆಂಫಿಥಿಯೇಟರ್, ನೀರಿನ ಕಾರಂಜಿಗಳು, ಹೂದೋಟ, ದೀಪಾಲಂಕಾರ, ಒಳಗೊಂಡಿದೆ.
ಮುಖ್ಯಮಂತ್ರಿ ಚಾಲನೆ:
ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ. ಅಂಬರೀಶ್ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಈ ವೇಳೆ ಸಂಸದೆ ಸುಮಲತಾ ಅಂಬರೀಶ್, ನಟ ಅಭಿಷೇಕ್ ಅಂಬರೀಶ್, ಸಚಿವ ಗೋಪಾಲಯ್ಯ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮತ್ತವರ ಪದಾಧಿಕಾರಿಗಳು ಸೇರಿದಂತೆ ಚಿತ್ರರಂಗದ ಹಿರಿ- ಕಿರಿಯ ನಟರು , ಅಭಿಮಾನಿಗಳು ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

ರಸ್ತೆಗೆ ಅಂಬರೀಶ್ ಹೆಸರು
ರೇಸ್ ಕೋರ್ಸ್ ರಸ್ತೆಗೆ ಡಾ.ಅಂಬರೀಶ್ ಹೆಸರನ್ನು ನಾಮಕರಣ ಮಾಡಲಾಗಿದ್ದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಸರು ಲೋಕಾರ್ಪಣೆ ಮಾಡಲಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರದ ಸಚಿವರು, ಶಾಸಕರು, ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.