ಸಂಜೆಯಾದರೆ ಸಾಕು ನೆನಪಾಗುವ ಪತ್ರಿಕೆ:ನಾಗೇಂದ್ರ

ಬಳ್ಳಾರಿ, ಡಿ.31: ದಿನದ ಸಂಜೆಯಾದರೆ ಸಾಕು ಸಂಜೆವಾಣಿ ಪತ್ರಿಕೆ ಓದುವ ನೆನಪಾಗುವುದು ಈ ರೀತಿಯ ಪ್ರಭಾವವನ್ನು ಸಂಜೆವಾಣಿ ನನ್ನಲ್ಲಿ ಆವರಿಸಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅಭಿಪ್ರಾಯಪಟ್ಟರು.
ಸಂಜೆವಾಣಿ ಕಛೇರಿಯಲ್ಲಿಂದು ಪತ್ರಿಕೆ ಹೊರತಂದಿರುವ 2021ರ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ, ಕಳೆದ 25ವರ್ಷಗಳಿಂದ ನಗರದಲ್ಲಿ ಸಂಜೆವಾಣಿ ಪತ್ರಿಕೆ ಓದುಗರನ್ನು ಆಕರ್ಷಿಸಿದ್ದು, ರಜತ ವರ್ಷ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಲು ನನಗೆ ಹರ್ಷ ಎನ್ನಿಸುತ್ತಿದೆ ಎಂದರು.
ಪತ್ರಿಕೆಯು ಬಳ್ಳಾರಿ ಜಿಲ್ಲೆಯ ಸಮಗ್ರ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ನಗರದಲ್ಲಿ ಜರುಗುವ ಎಲ್ಲಾ ಘಟನೆಗಳು ಸಂಜೆವಾಣಿಯಲ್ಲಿ ಸುದ್ದಿಯಾಗುವುದರಿಂದ, ಬಳ್ಳಾರಿ ಜನತೆ ಪತ್ರಿಕೆಯ ಬಗ್ಗೆ ಅಭಿಮಾನ ಹೊಂದಿದ್ದಾರೆ. ಈ ರೀತಿ ಅಭಿಮಾನ ಹೊಂದಿದವರಲ್ಲಿ ನಾನು ಇದ್ದೇನೆ ಎಂದರು. ನಗರದ ರಸ್ತೆಗಳಲ್ಲಿ ಸಂಜೆ ಸಂಚರಿಸುತ್ತಿರುವಾಗ ಎಲ್ಲರ ಕೈಯಲ್ಲೂ ಸಂಜೆವಾಣಿ ಪತ್ರಿಕೆ ಕಾಣಸಿಗುತ್ತದೆ. ಅಂಗಡಿಗಳ ಗಲ್ಲಪೆಟ್ಟಿಗೆಯಲ್ಲಿ ಕುಳಿತ ಮಾಲೀಕರ ಕೈಯಲ್ಲೂ ಸಂಜೆವಾಣಿ ಪತ್ರಿಕೆ ರಾರಾಜಿಸುತ್ತಿರುತ್ತದೆ. ಹೀಗೆ ಬಳ್ಳಾರಿ ಜನತೆ ಮತ್ತು ಪತ್ರಿಕೆಯ ನಡುವೆ ಒಂದು ಉತ್ತಮ ಸಂಬಂಧ ಬೆಳೆದಿದೆ ಎಂದರು.
ಶಾಸಕರಾಗಿ ನಾನು ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳು ಸಂಜೆವಾಣಿಯಲ್ಲಿ ಪ್ರಕಟವಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನನ್ನ ರಾಜಕೀಯ ಜೀವನದಲ್ಲೂ ಪತ್ರಿಕೆ ತನ್ನದೇ ಪ್ರಭಾವವನ್ನು ಬೀರಿದೆ ಎಂದರು. ಗ್ರಾಮೀಣ ಭಾಗಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಪತ್ರಿಕೆ ವರದಿ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಗರ ಕೇಂದ್ರೀತ ಸುದ್ದಿಗಳಿಗಿಂತ ಗ್ರಾಮೀಣ ಭಾಗದ ಸುದ್ದಿಗಳಿಗೆ ಒತ್ತು ನೀಡುವ ಮೂಲಕ ಗ್ರಾಮೀಣ ಜನತೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂಜೆವಾಣಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಅನಂತ್ ರಾಜು, ಅಣ್ಣ ನಾಗರಾಜು, ಗೋವರ್ಧನರೆಡ್ಡಿ, ಮಲ್ಲಯ್ಯ, ರಾಮಾಂಜಿನೇಯ ನಗರ ಚಿನ್ನಿ, ಕರೂರು ಸುಧಾಕರರೆಡ್ಡಿ, ಗೋನಾಳ್ ನಾಗಭೂಷಣಗೌಡ, ಮತ್ತಿತರರು ಉಪಸ್ಥಿತರಿದ್ದರು.