ಸಂಜೀವಿನಿ ಗುಂಪು ಸೇರಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ

ಲಿಂಗಸೂಗೂರ,ಜು.೧೩-
ಪ್ರತಿಯೊಬ್ಬರೂ ಸಂಜೀವಿನಿ ಗುಂಪು ಸೇರಿ ಎಲ್ಲಾ ಇಲಾಖೆಯ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕೆಂದು ವಲಯ ಕೌಶಲ್ಯ ಮೇಲ್ವಿಚಾರಕರು ಬಸವರಾಜ ಕಟ್ಟಿಮನಿ ಹೇಳಿದರು.
ತಾಲೂಕೀನ ಈಚನಾಳ ಗ್ರಾಮ ಪಂಚಾಯತಲ್ಲಿ ನರೇಗಾ ಕಾಮಗಾರಿ ಕೆಲಸದಲ್ಲಿ ತೊಡಗಿಸಿಕೊಂಡ ಕೂಲಿ ಕಾರ್ಮಿಕರಿಗೆ ಭೇಟಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಯೋಜನೆಯಾದ ನರೇಗಾ ಮತ್ತು ಸಂಜೀವಿನಿ ಯೋಜನೆಯನ್ನು ಪ್ರತಿಯೊಂದು ಮನೆಗೆ ಮುಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ, ಮಹಿಳೆಯರಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಮ್) ಕಾರ್ಯಕ್ರಮದಡಿಯಲ್ಲಿ ಸಾಕಷ್ಟು ಗ್ರಾಮೀಣ ಮಹಿಳೆಯರನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಿ ಅವರುಗಳ ಸಮಗ್ರ ಏಳಿಗೆಗೆ ಶ್ರಮಿಸುತ್ತಿದೆ ಎಂದರು.
ವಲಯ ಮೇಲ್ವಿಚಾರಕ ರಾಘವೇಂದ್ರ ಮಾತನಾಡಿ ಯೋಜನೆಯಲ್ಲಿ ಸ್ವಾವಲಂಬನೆ ಜೀವನ ನಡೆಸಲು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಹಾಗೂ ೧೮ ರಿಂದ ೩೫ ವರ್ಷದ ನಿರೋದ್ಯೋಗ ಯುವಕ, ಯುವತಿಯರಿಗೆ ಉದ್ಯೋಗದ ತರಬೇತಿ, ಗ್ರಾಮೀಣ ಪ್ರದೇಶದಲ್ಲಿ ಬಡ ಮತ್ತು ದುರ್ಬಲ ವರ್ಗದ ಮಹಿಳೆಯರಿಗೆ ಕಿರು ಮತ್ತು ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸುವುದು ಹಾಗೂ ಕೃಷಿ ಆಧಾರಿತ ಗ್ರಾಮೀಣ ಬಡ ಮಹಿಳೆಯರಿಗಾಗಿ ವಿವಿಧ ರೀತಿಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರಿಂದ ಸಂಜೀವಿನಿ ಯೋಜನೆಯಲ್ಲಿ ಗುಂಪುಗಳನ್ನು ರಚನೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಜೀವಿನಿಯ ದೇವಮ್ಮ, ಎಲ್‌ಸಿಆರ್‌ಪಿ ಬಸಮ್ಮ, ಶ್ರೀದೇವಿ ಹಾಗೂ ನರೇಗಾ ಮೆಟ್‌ಗಳಾದ ಕುಪ್ಪಣ್ಣ ಹಳ್ಳಿ, ದ್ಯಾಮಣ್ಣ ಗೌಲ್ಙ, ಹನುಮಂತರೆಡ್ಡಿ, ಭೀಮಣ್ಣ ಹಾಗೂ ಕೂಲಿ ಕಾರ್ಮಿಕರು ಇದ್ದರು.