ಸಂಜೀವರಾಯನಕೋಟೆ ಶಾಲೆಯಲ್ಲಿ ನೆಹರು ಪುಣ್ಯತಿಥಿ ಕಾರ್ಯಕ್ರಮ


(ಸಂಜೆಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.27: ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಪ್ರಜಾಪ್ರಭುತ್ವ ದೇಶಕ್ಕೆ ಅಗತ್ಯವಾದ ಸಂವಿಧಾನ, ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ದವರು ನೆಹರು ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೆಹರು ಅವರ 59ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ ಜೈಲುವಾಸ ಮಾಡುವ ಸಂದರ್ಭದಲ್ಲಿ ಮಗಳಿಗೆ ಬರೆದ ಪತ್ರಗಳು ಸಂಪೂರ್ಣ ದೇಶದ ಕುರಿತಾಗಿದ್ದವು.ಲೇಖಕರಾಗಿ,ಸಾಹಿತಿಗಳಾಗಿ ಬರೆದ ಮೂರು ಪುಸ್ತಕಗಳಾದ ತಂದೆಯಿಂದ ಮಗಳಿಗೆ ಪತ್ರ,ಗ್ಲಿಂಪ್ಸಸ್ ಆಫ್ ವರ್ಡ್ ಇತಿಹಾಸ ಹಾಗೂ ಡಿಸ್ಕವರಿ ಆಪ್ ಇಂಡಿಯಾ ವಿಶ್ವ ಮನ್ನಣೆ ಪಡೆದಿವೆ. ಅವರ ಹದಿನೇಳು ವರ್ಷ ಅಧಿಕಾರ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ಜನಮೆಚ್ಚಿಗೆ ಪಡೆದಿದ್ದಾರೆ ಜೊತೆಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.
ಗ್ರಂಥಾಲಯದ ಪಾಲಕರಾದ ಕೆ.ಸಿದ್ದಪ್ಪ ಪೂಜೆ ನೆರವೇರಿಸಿದರು. ಶಿಕ್ಷಕರಾದ ಸುಂಕಪ್ಪ, ಗುರುಪ್ರಸಾದ್, ಕೃಷಿ ಇಲಾಖೆಯ ನೌಕರ ಶಿವರಾಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.