(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.30 : ವಸಂತ ಋತು,ಚೈತ್ರ ಮಾಸದಲ್ಲಿ ಕೋಗಿಲೆ ಮಾವಿನ ಚಿಗುರು ತಿಂದು ಇಂಪಾಗಿ ಕೂಗಿ ಜನಮನ ಸೆಳೆಯುವಂತೆ,ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪೋಷಕರನ್ನು ಹಾಗೂ ಕಲಿಸಿದ ಶಿಕ್ಷಕರನ್ನು ಸಂತೋಷ ಪಡಿಸಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನಲ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ಕನ್ನಡಾಂಬೆಗೆ ನಮನ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕನ್ನಡ ಮಾತೆ ಭುವನೇಶ್ವರಿಯ ಆಶೀರ್ವಾದದಿಂದ 5ನೇ ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆ ಉತ್ತಮವಾಗಿ ಪೂರ್ಣ ಗೊಳ್ಳುತ್ತಿವೆ.ಅದಕ್ಕೆ ಕಾರಣ ಶಿಕ್ಷಕರ ಶ್ರಮ.ಜೊತೆಗೆ ಅಧಿಕಾರಿಗಳ,ಪೋಷಕರ ಸಹಕಾರ ಕೂಡ ಇದೆ. ಆದ್ದರಿಂದ ನಿಮ್ಮ ಸೇವೆ ಗಮನಿಸಿ ನಿಮ್ಮನ್ನು ಗೌರವಿಸಿ,ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.
ಮಿಂಚೇರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕೃಷ್ಣವೇಣಿ,ಬಸಪ್ಪ,ಚರಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ನಾಗರಾಜ,ಶಾರದಾ ವಿದ್ಯಾನಿಕೇತನ ಶಾಲೆಯ ಶಿಕ್ಷಕರಾದ ಅಕ್ಕ ನಾಗಮ್ಮ,ಸಂಜೀವರಾಯನಕೋಟೆಯ ಶಾಲೆಯ ಬಸವರಾಜ, ಶಶಮ್ಮ ಮುಂತಾದವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಿಕ್ಷಕರಾದ ಶಶಮ್ಮ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಿದರು.
ಶಿಕ್ಷಕರಾದ ಮುನಾವರ ಸುಲ್ತಾನ,ದಿಲ್ಷಾದ್ ಬೇಗಂ,ಚನ್ನಮ್ಮ, ಶ್ವೇತಾ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.