ಸಂಜೀವರಾಯನಕೋಟೆಯಲ್ಲಿ ಇಂದಿರಾ ಸ್ಮರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಜೂ 10
:  ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ  ಜೀವನ ಮತ್ತು ಸಾಧನೆ ಕುರಿತ ಉಪನ್ಯಾಸ ನಡೆಯಿತು.
ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಉಪನ್ಯಾಸ ನೀಡಿ. ದೇಶದ ಮೂರನೇ ಹಾಗೂ ಪ್ರಥಮ ಮಹಿಳಾ ಪ್ರಧಾನಮಂತ್ರಿಯಾಗಿ ಸತತ ಹದಿನೈದು ವರ್ಷ 365 ದಿನಗಳ ಕಾಲ 1966 ರಿಂದ 1977 ಹಾಗೂ1980 ರಿಂದ 1984 ರವರೆಗೆ ಆಡಳಿತ ನಡೆಸಿ ನೀರಾವರಿ ಯೋಜನೆ, ಖಾಸಗಿ ಬ್ಯಾಂಕ್ ಗಳ ರಾಷ್ಟ್ರೀಕರಣ,ಕೃಷಿಯಲ್ಲಿ ಅಲ್ಪಕಾಲದ ಬೆಳೆಗಳು, ಬಡತನ ನಿರ್ಮೂಲನೆ ಹಾಗೂ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರು ಇಂದಿರಾ ಗಾಂಧಿ ಎಂದರು.
ಸಂವಿಧಾನದ ಆಶಯಗಳಿಗೆ ತಕ್ಕಂತೆ ಶಿಕ್ಷಣ, ಸಮಾನತೆ,ಆರೋಗ್ಯ, ವೈಜ್ಞಾನಿಕ,ತಾಂತ್ರಿಕ ಕ್ಷೇತ್ರ ಹಾಗೂ ಸಾರ್ವಜನಿಕ ಹುದ್ದೆಗಳ ಕಡೆ ಹೆಚ್ಚು ಗಮನಹರಿಸಿ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದರು ಎಂದು ಹೇಳುವುದರ ಜೊತೆಗೆ ವಿದ್ಯಾರ್ಥಿಗಳು ಇಂದಿರಾ ಗಾಂಧಿಯವರ ಆದರ್ಶ ಮೈಗೂಡಿಸಿ ಕೊಳ್ಳಬೇಕೆಂದು ಹೇಳಿದರು.
ಶಿಕ್ಷಕರಾದ ಮುನಾವರ ಸುಲ್ತಾನ,ಬಸವರಾಜ, ದಿಲ್ಷಾದ್ ಬೇಗಂ,ಮೋದಿನ್ ಸಾಬ್, ಸುಧಾ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.