ಸಂಜನಾಗೂ ಜೈಲು ಗ್ಯಾರಂಟಿ

ಬೆಂಗಳೂರು, ಸೆ. ೧೬- ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿ ಅವರ ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದ್ದು ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರುವುದು ಬಹುತೇಕ ಖಚಿತವಾಗಿದೆ.
ತಮ್ಮ ವಶದಲ್ಲಿರುವ ಸಂಜನಾರನ್ನು ಸಂಜೆ ನಾಲ್ಕು ಗಂಟೆಗೆ ಸಿಸಿಬಿ ಅಧಿಕಾರಿಗಳು ೧ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಸಿಸಿಬಿ ಕಸ್ಟಡಿ ಮುಗಿದಿರುವುದರಿಂದ ನ್ಯಾಯಾಲಯ ಸಂಜನಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಸಂಜನಾರ ಕೊನೇ ಹಂತದ ವಿಚಾರಣೆ ನಡೆಸಿ ಹಲವು ಮಾಹಿತಿಯನ್ನುಸಂಗ್ರಹಿಸಿದ್ದಾರೆ. ಸಂಜನಾ ಬಳಸುತ್ತಿದ್ದ ಮೂರು ಮೊಬೈಲ್ ಗಳಲ್ಲಿ ಹೊರ ಒಳಬಂದಿರುವ ಕರೆಗಳು ವಾಟ್ಸಾಪ್ ಟೆಲಿಗ್ರಾಂನಲ್ಲಿರುವ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಈಗಾಗಲೇ ಸಂಜನಾ ಮೂರು ಮೊಬೈಲ್‌ಗಳು ರಿಟ್ರೀವ್ ಆಗಿದ್ದ ಹಿನ್ನೆಲೆಯಲ್ಲಿ ಸಿಮ್ ಇಲ್ಲದೇ ಮೊಬೈಲ್ ಫೋನ್ ಬಳಕೆ ಮಾಡಿದ್ದು ಏಕೆ ಯಾವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿತ್ತು ಸಿಮ್ ಇಲ್ಲದೇ ಸ್ಮಾರ್ಟ್‌ಫೋನ್ ಬಳಸುತ್ತಿದ್ದ ಔಚಿತ್ಯವೇನಿತ್ತು.. ಯಾವ ಕಾರಣಕ್ಕಾಗಿ ವೈಫೈ ಬಳಕೆ ಮಾಡಿ ಮೊಬೈಲ್ ಗಳನ್ನ ಬಳಸಲಾಗುತ್ತಿತ್ತು ಎಂಬಿತ್ಯಾದಿ ಪ್ರಶ್ನೆಗಳನ್ನಿಟ್ಟು ಕೊಂಡು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.