ಸಂಚು, ಷಡ್ಯಂತ್ರ ಸಿದ್ದು ವೃತ್ತಿ, ಪ್ರವೃತ್ತಿ;ಜೋಷಿ

ಬೆಂಗಳೂರು, ಜು. ೧೨- ಅಧಿಕಾರದ ದುರಾಸೆಗೆ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ ಸಿದ್ಧರಾಮಯ್ಯನವರು ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಮುಗಿಸಿದರು ಎಂದು ಹೇಳುತ್ತಿರುವುದು ಸರಿಯಲ್ಲ. ಸಿದ್ಧರಾಮಯ್ಯನವರಿಗೆ ಈ ರೀತಿ ಮಾತನಾಡಲು ನೈತಿಕತೆ ಇದೆಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಶ್ನಿಸಿದ್ದಾರೆ.
ಸಿದ್ಧರಾಮೋತ್ಸವದ ನಂತರಕಾಂಗ್ರೆಸ್ ಅವನತಿಯಾಗಲಿದೆ ಎಂಬ ತಮ್ಮ ಹೇಳಿಕೆಗೆ ಟ್ವೀಟರ್‌ನಲ್ಲಿ ಟೀಕಿಸಿದ್ದ ಸಿದ್ಧರಾಮಯ್ಯನವರಿಗೆ ಇಂದು ಟ್ವೀಟ್ ಮೂಲಕ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಷಿ ಅವರು, ಒಳಸಂಚು ಮತ್ತು ಷಡ್ಯಂತ್ರವನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿರುವ ಸಿದ್ಧರಾಮಯ್ಯನವರಿಗೆ ತಾವು ಮಾಡಿದ ಕುತಂತ್ರಗಳೆ ಬೇರೆ ಪಕ್ಷಗಳಲ್ಲಿರಬಹುದು ಎಂದು ಭಾಸವಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರನ್ನು ಜೈಲಿ ಕಳುಹಿಸಲು ಕಾಂಗ್ರೆಸ್‌ನ ಸರ್ವೋಚ್ಛ ನಾಯಕಿ ಸೋನಿಯಾಗಾಂಧಿ ಯಾವ ರೀತಿ ಕಾರಣರಾದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಅವರು ಟ್ವೀಟರ್‌ನಲ್ಲಿ ಹರಿಹಾಯ್ದಿದ್ದಾರೆ. ಇಡಿ ಮತ್ತು ಸಿಬಿಐನ ಬಳಸಿ ಕಾಂಗ್ರೆಸ್ ಪಕ್ಷವನ್ನು ಒಡೆದು ನೀವು ಯಾವ ರೀತಿ ಮುಖ್ಯಮಂತ್ರಿಯಾಗಿದ್ದಿರೀ ಎಂಬುದು ಮರೆತಿರಾ ಸಿದ್ಧರಾಮಯ್ಯ ಎಂದು ಜೋಷಿ ಟ್ವೀಟರ್‌ನಲ್ಲಿ ಲೇವಡಿ ಮಾಡಿದ್ದಾರೆ.
ನಿಮ್ಮ ಅಧಿಕಾರದ ದುರಾಸೆಗಾಗಿ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಇದನ್ನು ಡಿ.ಕೆ. ಶಿವಕುಮಾರ್ ಅವರ ತಾಯಿಯೇ ಹೇಳಿದ್ದಾರೆ. ಅದನ್ನು ಮರೆತು ಯಡಿಯೂರಪ್ಪನವರನ್ನು ಬಿಜೆಪಿಯವರು ಮುಗಿಸಿದರು ಎಂದು ಸುಳ್ಳು ಹೇಳುತ್ತಿದ್ದೀರಿ ಇದು ಸರಿಯಲ್ಲ ಎಂದು ಜೋಷಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.