ಸಂಚಾರ ಸಮಸ್ಯೆ ಬಗೆಹರಿಸಲು ಮೆಟ್ರೋ ವಿಸ್ತರಿಸುವ ಗುರಿ:ಮಂಜುಳಾ ಅರವಿಂದ ಲಿಂಬಾವಳಿ

ಕೆ.ಆರ್.ಪುರ,ಮೇ.೮- ಕ್ಷೇತ್ರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಮೆಟ್ರೋ ವ್ಯಾಪ್ತಿಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿರುವುದಾಗಿ ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.

ಚುನಾವಣಾ ಪ್ರಚಾರದ ನಿಮಿತ್ತ ಕ್ಷೇತ್ರದ್ಯಾಂತ ಮಿಂಚಿನ ಸಂಚಾರ ನಡೆಸಿ ಮತಯಾಚಿಸುತ್ತಿರುವ ಅವರು ಮಹದೇವಪುರ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಮಂಡಲದ ವಿವಿಧ ಭಾಗಗಳಲ್ಲಿ ಚುನಾವಣಾ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು.

ಕ್ಷೇತ್ರದಲ್ಲಿ ಹಲವಾರು ಸಾಫ್ಟ್‌ವೇರ್ ಕಂಪೆನಿಗಳು, ಇಂಟರ್ ನ್ಯಾಶನಲ್ ಶಾಲೆಗಳು, ಕಾರ್ಪೊರೇಟ್ ಆಸ್ಪತ್ರೆಗಳು ಇರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಕ್ಷೇತ್ರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪತಿ ಅರವಿಂದ ಲಿಂಬಾವಳಿ ಅವರು ಸಾಕಷ್ಟು ಶ್ರಮವಹಿಸಿದ್ದಾರೆ ಎಂದರು.

ಕ್ಷೇತ್ರದಲ್ಲಿ ಸುಮಾರು ೧೫ ಲಕ್ಷ ಜನ ವಾಸವಾಗಿದ್ದಾರೆ ಜೊತೆಗೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೋಗಿ ಬರುವ ಜನರು ಇದ್ದಾರೆ. ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಶಾಸಕ ಹಾಗೂ ಪತಿ ಅರವಿಂದ ಲಿಂಬಾವಳಿ ರವರ ಸಂಕಲ್ಪ ಮತ್ತು ನಿರಂತರ ಪರಿಶ್ರಮದಿಂದ ಕೆ.ಆರ್.ಪುರ ದಿಂದ ಕಾಡುಗುಡಿಯ ವರೆಗೆ ಮೆಟ್ರೋ ಕಾಮಗಾರಿ ಪೂರ್ಣಗೊಂಡು ಪ್ರಧಾನಿ ನರೇಂದ್ರ ಮೋದಿ ಯವರ ಹಸ್ತದಿಂದ ಉದ್ಘಾಟನೆಗೊಂಡಿದೆ, ಮುಂದಿನ ದಿನಗಳಲ್ಲಿ ಮೆಟ್ರೋ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲು ಶ್ರಮ ವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಗ್ರಾಮಾಂತರ ಅಧ್ಯಕ್ಷ ನಟರಾಜ್, ಭೂನ್ಯಾಯ ಮಂಡಳಿ ಸದಸ್ಯ ಮಧುಕುಮಾರ್, ಬಿದರಹಳ್ಳಿ ಪಂಚಾಯತಿ ಅಧ್ಯಕ್ಷ ಬಿ.ಜಿ.ರಾಜೇಶ್,ಮುಖಂಡರಾದ ವೇಣು,ಸಂಪಂಗಿ ಇದ್ದರು.

ಸುದ್ದಿಚಿತ್ರ:ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಪ್ರಚಾರ ಮಾಡಿದರು.