ಸಂಚಾರ ನಿಯಮ ಉಲ್ಲಂಘನೆ : ಪೊಲೀಸರಿಂದ ಮನೆಬಾಗಿಲಿಗೆ ನೋಟೀಸ್

ಬೆಂಗಳೂರು,ನ.೪-ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳ ದಂಡದ ನೋಟೀಸ್ ನ್ನು ಮಾಲೀಕರ ಮನೆಗೆ ನಗರದ ಸಂಚಾರ ಪೊಲೀಸರು ತಲುಪಿಸಿ ದಂಡ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಅಂಚೆಯಿಂದ ನೋಟೀಸ್ ತಲುಪುವಲ್ಲಿ ತಡವಾಗುವುದು ವಸೂಲಾತಿ ನಿರೀಕ್ಷಿತ ಮಟ್ಟದಲ್ಲಿ ಉಂಟಾಗದಿರುವುದು ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿರುವುದನ್ನು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಠಾಣೆಯ ಪೊಲೀಸರಿಂದಲೇ ನೋಟೀಸ್ ತಲುಪಿಸಲು ಕ್ರಮ ಕೈಗೊಂಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ವಾಹನಗಳ ಮಾಲೀಕರ ಮನೆಯನ್ನು ಸಂಬಂಧಿಸಿದ ಠಾಣೆಗಳ ಪೊಲೀಸರು ಪತ್ತೆ ಹಚ್ಚಿ ನೋಟೀಸ್ ತಲುಪಿಸಲಿದ್ದಾರೆ.
ಅಲ್ಲದೇ ದಂಡದ ಮೊತ್ತವನ್ನು ಸ್ಥಳದಲ್ಲಿಯೇ ಪಾವತಿಸಿಕೊಳ್ಳುವುದು ಮುಂದೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ತಿಳಿ ಹೇಳಲಿದ್ದಾರೆ.
ಪ್ರತಿ ಠಾಣೆಯ ವ್ಯಾಪ್ತಿಯಲ್ಲಿ ಪ್ರತಿದಿನ ಕನಿಷ್ಠ ೫೦ರಿಂದ ೧೦೦ರವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳು ದಾಖಲಾಗಿವೆ.
ಕೂಡಲೇ ಅವುಗಳ ನೋಟೀಸ್ ನ್ನು ಸಂಚಾರ ಉಸ್ತುವಾರಿ ಕೇಂದ್ರ (ಟಿಎಂಸಿ)ಯಿಂದ ಸಂಬಂಧಿಸಿದ ಸಂಚಾರ ಪೊಲೀಸ್ ಠಾಣೆಗಳಿಗೆ ರವಾನೆಯಾಗಲಿದೆ.
ಆಯಾಯ ಸಂಚಾರ ಠಾಣೆಯ ಪೇದೆಯಿಂದ ಹಿಡಿದು ಸಬ್ ಇನ್ಸ್‌ಪೆಕ್ಟರ್ ವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಮಾಲೀಕರ ಮನೆಗಳಿಗೆ ನೋಟೀಸ್ ಗಳನ್ನು
ತಲುಪಿಸಿ ದಂಡ ಪಾವತಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಒಂದೇ ಪ್ರಕರಣವಾಗಲಿ ನೋಟೀಸ್ ನ್ನು ತಲುಪಿಸಿ ಕ್ರಮ ಕೈಗೊಳ್ಳಲಾಗುತ್ತದೆ ತಪ್ಪಹ ವಿಳಾಸ ನೀಡಿರುವ ಮಾಲೀಕರ ನೈಜ ವಿಳಾಸ ಪತ್ತೆಯ ಜೊತೆಗೆ ಅತಿಹೆಚ್ಚು ಉಲ್ಲಂಘನೆ ಮಾಡಿರುವ ವಾಹನಗಳ ಚಾಲಕರನ್ನು ಪತ್ತೆಹಚ್ಚಿ ದಂಡವನ್ನು ಪಾವತಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆ ಬಾಗಿಲಿಗೆ ತೆರಳಿ ದಂಡ ವಸೂಲಿ ಮಾಡುತ್ತಿರುವ ಟ್ರಾಫಿಕ್ ಪೊಲೀಸರು.