ಸಂಚಾರ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ: ಸಿಎಂ

ಬೆಂಗಳೂರು, ಸೆ.8 – ನಗರದ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಂದಿನ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಕಾಯ್ದೆ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರದ ಭೂ ಸಂಪರ್ಕ ಮತ್ತು ಹೆದ್ದಾರಿಗಳ ಸಚಿರ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿಬಿಎಂಪಿ, ಬಿಡಿಎ, ಬಿಎಂಆರ್ ಡಿಎ, ಲೋಕೋಪಯೋಗಿ ಇಲಾಖೆ ಗಳಿಂದ ಹಲವು ಕಾಮಗಾರಿಗಳು ನಡೆಯುತ್ತಿರುತ್ತವೆ. ಈ ಬಗ್ಗೆ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಿದರೆ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಿದ್ದಾರೆ.

ಎಲ್ಲ ಸಂಸ್ಥೆಗಳ ಜೊತೆಗೆ ರೈಲ್ವೆ , ಮಟ್ರೋ ವನ್ನು ಒಳಗೊಂಡಂತೆ ಬೆಂಗಳೂರು ಮತ್ತು ಬೆಂಗಳೂರು ಸುತ್ತಮುತ್ತಲಿನ ಸಂಚಾರ ದಟ್ಟಣೆಯ ನಿರ್ವಹಣೆಗೆ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಇಡೀ ರಾಷ್ಟ್ರದ ರಸ್ತೆ ಸಾರಿಗೆ ವ್ಯವಸ್ಥೆ ಬಗ್ಗೆ ‘ಮಂಥನ’ ಸಮಾವೇಶವನ್ನು 3 ದಿನಗಳ ಕಾಲ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ರಸ್ತೆ ಹಾಗೂ ಸಂಚಾರದಟ್ಟಣೆಯ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಾಗಿದ್ದು, ಕೇಂದ್ರದ ಸಹಯೋಗ ಮತ್ತು ಸಹಕಾರವನ್ನು ಕೋರಲಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳು ಬೆಂಗಳೂರಿನ ಒಳಗೆ ಮತ್ತು ಹೊರಗೆ ಹಾದುಹೋಗುತ್ತವೆ. ಸಂಚಾರ ದಟ್ಟಣೆಯ ನಿವಾರಣೆಗೆ ರಸ್ತೆ ನಿರ್ಮಾಣಗಳು ಬಲು ಮುಖ್ಯವಾಗಿದೆ. ಹಲವು ವಿಚಾರಗಳನ್ನು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದ ಅವರು ಮೂರು ಮಟ್ಟದ ಸಾರಿಗೆ ತಂತ್ರಜ್ಞಾನದ ಯೋಜನೆ ಜಾರಿಗೆ ತೀರ್ಮಾನ ಮಾಡಲಾಗಿದೆ ಎಂದರು

ಮೆಟ್ರೋ, ಫ್ಲೈ ಓವರ್ ಹಾಗೂ ರಸ್ತೆಗೆ ಬಳಕೆಯಾಗುವಂತಹ ಬಹುಪಯೋಗಿ ಪಿಲ್ಲರ್ ನಿರ್ಮಿಸುವ ತಂತ್ರಜ್ಞಾನವನ್ನು ಬಳಸಿ ಬೈಯಪ್ಪನಹಳ್ಳಿಯಲ್ಲಿ ರೈಲು ನಿರ್ಮಾಣ ಯೋಜನೆ ರೂಪಿಸಲಾಗಿದೆ. ಒಂದೇ ಪಿಲ್ಲರ್ ನ್ನು ಬಳಸಿ ಮೂರು ಅಂತಸ್ತುಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಈ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡರೆ ಭೂ ಸ್ವಾಧೀನದ ಪ್ರಮಾಣ ಕಡಿಮೆಯಾಗುವುದು. ಈ ಬಗ್ಗೆ ಅಂತರರಾಷ್ಟ್ರೀಯ ತಜ್ಞರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ ಎಂದರು.