ಸಂಚಾರ ದಟ್ಟಣೆ ನಿಗಾ:ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆ

ದಾವಣಗೆರೆ; ಮಾ. 17; ನಗರದಲ್ಲಿ ಟ್ರಾಫಿಕ್ ನಿಯಂತ್ರಿಸಲು ನಗರದ ಹಲವೆಡೆ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.ಸ್ಮಾರ್ಟಸಿಟಿ ಲಿಮಿಟೆಡ್ ವತಿಯಿಂದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಆಯೋಜಿಸಲಾದ  ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾನ್ಯವಾಗಿ ನಗರಗಳಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಗಳಿಗಿಂತ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ನಿಂದ ವಾಹನ ಸವಾರರಿಗೆ ಸಮಯದ ಉಳಿತಾಯವಾಗುತ್ತದೆ, ವಿಷೇಶವಾಗಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಇದನ್ನು ನಿಯೋಜಿಸಲಾಗಿದೆ ಎಂದರು.ಈ ವ್ಯವಸ್ಥೆಯು ರಸ್ತೆಯಲ್ಲಿರುವ ವಾಹನ ಪ್ರಮಾಣವನ್ನು ಗುರುತಿಸಿ ನಿರ್ದಿಷ್ಠ ಸಿಗ್ನಲ್ ಮೂಲಕ ಹಾದುಹೋಗಲು ಅಗತ್ಯವಿರುವಷ್ಟೇ ಸಮಯವನ್ನು ಲೆಕ್ಕ ಹಾಕಿ ವಾಹನ ಹೊರಡಲು ಅನುಮತಿಸುತ್ತದೆ. ಇದರಿಂದ ಸಿಗ್ನಲ್ ಗಳಲ್ಲಿ ಕಡಿಮೆ ಸಮಯ ಕಾಯುವ ಲೆಕ್ಕಾಚಾರ ಮಾಡುತ್ತದೆ ಹಾಗೂ ಇದರಿಂದ ರಸ್ತೆಯಲ್ಲಾಗುವ  ಸಾವು-ನೋವು, ಅಪಘಾತಗಳು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಮುಖ್ಯವಾಗಿ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು ಸಿಗ್ನಲ್ ಗಳಲ್ಲಿ ರೆಡ್ ಲೈಟ್ ಬರುವವರೆಗೂ ಕಾಯಬೇಕು, ವಾಹನದ ಸಾಮರ್ಥ್ಯ ಮೀರಿ ವಸ್ತುಗಳನ್ನು, ಜನರನ್ನು ಸಾಗಿಸುವುದು, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.