ಸಂಚಾರ ದಟ್ಟಣೆಗೆ ಶೀಘ್ರ ಪರಿಹಾರ

ಬೆಂಗಳೂರು, ಜು.೨೫-ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಶೀಘ್ರದಲ್ಲೇ ಇತಿಶ್ರೀ ಹಾಡಲು ರಾಜ್ಯ ಸರ್ಕಾರವು ಹೊಸ ಕ್ರಮಗಳನ್ನು ಕೈಗೊಂಡಿದೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜೊತೆ ನಡೆದ ಸಮನ್ವಯ ಪರಿಶೀಲನಾ ಸಭೆಯಲ್ಲಿ, ದಿನದ ೨೪ ಗಂಟೆಗಳಲ್ಲಿ ಎಷ್ಟು ಹೊತ್ತು ವಾಹನ ಸಂಚಾರ ದಟ್ಟಣೆ ಬೇರೆ ಬೇರೆಯಾಗಿದ್ದು ಈ ಬಗ್ಗೆ ಸಂಕ್ಷಿಪ್ತವಾಗಿ ಗಮನಿಸಿ ವರದಿ ನೀಡಲು ಸಮಿತಿ ರಚನೆಗೆ ಸೂಚಿಸಲಾಗಿದೆ.
ಸಭೆಯಲ್ಲಿ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆವಹಿಸಿದ್ದು, ಆಡಳಿತಗಾರರಾದ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಂ ಫರ್ವೇಜ್, ಜಲಮಂಡಳಿ ಅಧ್ಯಕ್ಷ ಜಯರಾಮ್, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆ ಗೌಡ, ಬಿಎಂಟಿಸಿ ನಿರ್ದೇಶಕ ಸೂರ್ಯ ಸೇನ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, ಇಂದು ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಮಿತಿ ಸಭೆ ನಡೆಸಿದ್ದೇವೆ. ಈಗಾಗಲೇ ಪೊಲೀಸ್ ಇಲಾಖೆ ೩೭೫೦ ರಸ್ತೆ ಗುಂಡಿಗಳ ಮಾಹಿತಿ ನೀಡಿತ್ತು.ಅದರಲ್ಲಿ ನಾವು ೩೦೦೦ ರಸ್ತೆ ಗುಂಡಿಗಳನ್ನು ಭರ್ತಿ ಮಾಡಿದ್ದೇವೆ ಎಂದರು.
ಉಳಿದ ೭೫೦ ಗುಂಡಿಗಳನ್ನು ಸಹ ಈ ವಾರದಲ್ಲಿ ಮುಚ್ಚಲಾಗುತ್ತದೆ. ಇನ್ನೂ ಸಂಚಾರಿ ಪೊಲೀಸರು ಒಟ್ಟು ೫೪ ಕಡೆ ಮಳೆಬಿದ್ದಾಗ ನೀರು ತುಂಬುವ ಪ್ರದೇಶಗಳಲ್ಲಿ ತುರ್ತು ಕಾಮಾಗಾರಿ ನಡೆಸುವಂತೆ ಕೇಳಿದ್ದಾರೆ ಎಂದು ಹೇಳಿದರು.
ಇನ್ನೂ, ೫೪ ಸ್ಥಳಗಳಲ್ಲಿ ಒಟ್ಟು ೫೩ ಸ್ಥಳಗಳಲ್ಲಿ ತಕ್ಷಣಕ್ಕೆ ಬೇಕಾಗಿರುವ ಕಾಮಾಗಾರಿ ನಡೆಸಲಾಗಿದೆ.ಮುಂದುವರೆದು ಶಾಶ್ವತ ಕಾಮಾಗಾರಿಗಳನ್ನು ಮಾಡಲಾಗುವುದು.
ಅತೀ ಹೆಚ್ಚು ಟ್ರಾಫಿಕ್ ಇರುವ ಜಂಕ್ಷನ್ ಗಳಲ್ಲಿ ನಾವು ಸರಣಿ ವಿಸಿಟ್ ಗಳನ್ನು ಮಾಡಿ ಟ್ರಾಫಿಕ್ ಜಾಮ್ ಕಡಿಮೆಗೊಳಿಸಲು ಬೇಕಾಗಿರುವ ಕ್ರಮ ಜಾರಿಗೆ ತಂದಿದ್ದೇವೆ ಎಂದು ವಿವರಿಸಿದರು. ಅದರ ಪರಿಣಾಮ ಕೆಲವು ಕಡೆ ಶೇಕಾಡ ೪೦ರಷ್ಟು ಸಂಚಾರ ಕಡಿಮೆಯಾಗಿದ್ದು, ಸುಗಮ ಸಂಚಾರಕ್ಕೆ ಅವಕಾಶವಾಗಿದೆ ಎಂದೂ ಅವರು ಒತ್ತಾಯ ಮಾಡಿದರು.