ಸಂಚಾರಿ ವಿಶ್ವವಿದ್ಯಾಲಯವಾಗಿರುವ ತರಳಬಾಳು ಹುಣ್ಣಿಮೆ

ಹನ್ನೆರಡನೇ ಶತಮಾನದಲ್ಲಿ ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾ.ಉಜ್ಜಯಿನಿ ಗ್ರಾಮದ ಹತ್ತಿರದ ಕಗ್ಗಲಿಪುರದ ವಾಸಿಗಳಾದ ಕುಚೀಮಾರ, ಸುಪ್ರಭೆ ಎನ್ನುವ ದಲಿತ ದಂಪತಿಗಳಿಗೆ ಜನಿಸಿದ ಮಗನೇ ವಿಶ್ವಬಂಧು ಮರುಳಸಿದ್ದ, ಮರುಳಸಿದ್ಧ ಹುಟ್ಟಿದ ನಂತರವೇ ಕುಚೀಮಾರ ಸುಪ್ರಭೆ ದಂಪತಿಗಳಿಬ್ಬರೂ ಮರಣ ಹೊಂದುತ್ತಾರೆ. ಊರಗೌಡರಾದ ಬಾಚನ ಗೌಡರಿಗೆ ಕುರುಳಿನ ಬಣವೆ ಹತ್ತಿರ ಈ ಅನಾಥ ಮಗು ಸಿಗುತ್ತದೆ. ಅಂದಿನಿAದ ಬಾಚನಗೌಡ ಮತ್ತು ಮಲ್ಲಮ್ಮನಿಗೆ ಮರುಳಸಿದ್ಧ ಮಗನಾಗುತ್ತಾನೆ.ಮರುಳಸಿದ್ಧ ಬೆಳೆಯುತ್ತಿದ್ದಂತೆ ಅವನ ಪವಾಡಗಳು ಬೆಳೆಯಲಾರಂಭಿಸಿದವು. ತನ್ನ ಊರಲ್ಲಿಯೇ ಒಂದು ದಿನ ಮಾರಿ ಹಬ್ಬ ನಡೆಯುತ್ತದೆ. ದೇವತೆಗೆ ಪ್ರಾಣಿ ಬಲಿ ಕೊಡುವುದನ್ನು ಮರುಳಸಿದ್ಧನೊಬ್ಬನೇ ಪ್ರತಿಭಟಿಸುತ್ತಾನೆ. ಅಂದಿನಿAದ ಊರೇ ಬೇಡವಾಗಿ ಚಿನ್ಮೂಲಾದ್ರಿಯಲ್ಲಿ (ಚಿತ್ರದುರ್ಗ) ರೇವಣಸಿದ್ಧರನ್ನು ಭೇಟಿಯಾಗಿ ದೀಕ್ಷೆಪಡೆದು, ಗುರುವಿನ ಆಜ್ಞೆಯಂತೆ ದೇಶ ಸಂಚಾರ ಕೈಗೊಂಡು ಕುರುಡಿ ಬೇತೂರಿಗೆ ಬರುತ್ತಾನೆ. ಅಲ್ಲಿ ಬ್ರಾಹ್ಮಣರು ಯಜ್ಞವನ್ನಾರಂಭಿಸಿರುತ್ತಾರೆ. ಯಜ್ಞ ಶಾಲೆಯಲ್ಲಿ ಬೇರೆಯವರಿಗೆ ಪ್ರವೇಶವಿರುವುದಿಲ್ಲ. ಇದನ್ನು ಪ್ರತಿಭಟಿಸಿ ಬ್ರಾಹ್ಮಣರ ಆಗ್ರಹಕ್ಕೆ ಗುರಿಯಾಗುತ್ತಾನೆ. ಇದರ ಪರಿಣಾಮವಾಗಿ ಮರುಳಸಿದ್ಧನನ್ನು ಅಣಜಿ ಕೆರೆಯಲ್ಲಿ ಕೈಕಾಲು ಕಟ್ಟಿ ತಳ್ಳುತ್ತಾರೆ. ಅಲ್ಲಿಂದ ಎದ್ದು ಬಂದು ಯಜ್ಞ ಶಾಲೆಗೆ ಮತ್ತೆ ಪ್ರವೇಶಿಸುತ್ತಾನೆ. ಬ್ರಾಹ್ಮಣರು ಕುರುಡಿಯಲ್ಲಿ ಮರುಳಸಿದ್ಧನನ್ನು ಹಗೇವಿಗೆ ಹಾಕಿ ಸುಡುವ ಸುಣ್ಣ ಸುರಿದು ನೀರು ಹಾಕುತ್ತಾರೆ. ಅಲ್ಲಿಂದ ಮತ್ತೆ ಯಜ್ಞ ಶಾಲೆಯನ್ನು ಪ್ರವೇಶಿಸುತ್ತಾನೆ. ಆಗ ಬ್ರಾಹ್ಮಣರು ತಮ್ಮ ದೊರೆಯಾದ ಹುಚ್ಚಂಗಿದುರ್ಗದ ಪಾಂಡ್ಯರಸನಲ್ಲಿ ಮೊರೆಯಿಡುತ್ತಾರೆ. ದೊರೆ ತನ್ನ ಆಳುಗಳಿಗೆ ಆನೆಯಿಂದ ಮರುಳಸಿದ್ದನನ್ನು ಬೆನ್ನಟ್ಟಿಸುತ್ತಾರೆ. ಮರುಳಸಿದ್ದ ಆನೆಗೆ ಮರೆಯಾಗಿ ಮುಚ್ಚಿಕೊಳ್ಳುತ್ತಾನೆ. ಅದು ಈಗ ಮುಚ್ಚಾನೂರಾಯಿತು. ನಂತರ ದೂರವಾಗಿ ಅದರ ಕೋಡನ್ನು ಮುರಿಯುತ್ತಾನೆ. ಅದು ಆನಗೋಡಾಯಿತು. ಅಲ್ಲಿಂದ ಬಾತಿ, ದ್ವಾರಸಮುದ್ರ, ಹಳೆಯಬೀಡು, ಮುಂತಾದ ಕಡೆಯಲ್ಲಿ ಹೋಗುತ್ತಾನೆ. ದಾವಣಗೆರೆ ತಾ. ಕುರುಡಿ ಬೇತೂರ, ಅಣಜಿ, ಮುಚ್ಚನೂರು, ಆನಗೋಡು, ಉಳುಪನಕಟ್ಟೆ ಈ ಗ್ರಾಮಗಳು ಘಟನೆಗೆ ಸಾಕ್ಷಿಯಾಗಿವೆ. ಅಲ್ಲೆಲ್ಲಾ ಮರುಳಸಿದ್ಧನ ಹೋರಾಟ( ಪವಾಡಗಳ) ಸ್ಮಾರಕಗಳು ಈಗಲೂ ಇವೆ.ದ್ವಾರ ಸಮುದ್ರದ ಅರಸರು ಮತ್ತು ಪ್ರಜೆಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಭಿನ್ನ ಮತದವರು ಮರುಳಸಿದ್ಧನನ್ನು ಕಂಡು ಗೌರವಿಸುತ್ತಿದ್ದರು. ಆಗ ದೊರೆಯು ಭಿನ್ನಮತದ ಪ್ರಮುಖರನ್ನು ಹಿಡಿದು ಅವರ ಕೈಗಳಿಗೆ ಕಾದ ಕಬ್ಬಿಣದ ಬಳೆಗಳನ್ನು ಹಾಕಿಸುತ್ತಾರೆ. ಆಗ ಮರುಳಸಿದ್ಧನ ಪವಾಡದಿಂದ ಮಳೆ ಬಂದು ಕಬ್ಬಿಣದ ಬಳೆಗಳು ತಣ್ಣಗಾಗುತ್ತವೆ. ಆಗ ದೊರೆ ಮತ್ತು ಪ್ರಜೆಗಳನ್ನು ಮರುಳಸಿದ್ಧನನ್ನು ಕೊಂಡಾಡಿ ಬೀಳ್ಕೊಡುತ್ತಾರೆ. ಅಲ್ಲಿಂದ ಮುಂದೆ ನಡೆದು ಬೈರವಗೊಂಡ ಮತ್ತು ಆತನ ಸತಿಲಿಂಗಮ್ಮನವರಿಗೆ ಮಾಂಸ ತಿನ್ನುವುದನ್ನು ಬಿಡಿಸಿ ದೀಕ್ಷೆಯನ್ನಿತ್ತು, ರಾಮ ತಂದೆಯ ಊರಾದ ರಾಮಶೆಟ್ಟಿಯ ಕರೆಯ ಮೇರೆಗೆ ಕೆಲವು ದಿನಗಳಿದ್ದು, ಆತನ ಶುಶ್ರೂಷೆಯಲ್ಲಿ ವಿಶ್ರಾಂತಿ ತೆಗೆದುಕೊಂಡು ಕೂಡ್ಲಿಗಿ ತಾಲ್ಲೂಕು ತೆಲುಗಬಾಳಿಗೆ ಬರುತ್ತಾನೆ.ತೆಲುಗಬಾಳಿನಲ್ಲಿ ಸಿದ್ಧಯ್ಯನನ್ನು ಶಿಷ್ಯನಾಗಿ ತೆಗೆದುಕೊಂಡು ತನ್ನೊಡನೆ ಊರುಗೋಲಾಗಿ ಕರೆದುಕೊಂಡು ಹೋಗಿ ಅಲ್ಲಿ ಗುಂಡ ಬ್ರಹ್ಮರನ್ನು ಕಂಡು ಕೊಲ್ಲಾಪುರಕ್ಕೆ ಬಂದು ಕರ ಹಾಡದ ದೊರೆಯ ಮಗಳಾದ ಮಾಯಾದೇವಿಯ ವಾಮಚಾರವನ್ನು ಖಂಡಿಸಿ, ಆಕೆಯನ್ನು ಶಿಷ್ಯಳನ್ನಾಗಿ ಮಾಡಿಕೊಂಡು ಕಗ್ಗಲಾಪುರಕ್ಕೆ ಹಿಂತಿರುಗುತ್ತಾನೆ. ಕಗ್ಗಲಾಪುರ, ಕ್ಯಾತನಹಳ್ಳಿ ಮಧ್ಯದಲ್ಲಿ ಒಂಬತ್ತು ಪಾದದ, ಎಲೆಯುಳ್ಳ ಸ್ಥಳವನ್ನು ತನ್ನ ವಾಸಕ್ಕೆ ಪಡೆದುಕೊಳ್ಳುತ್ತಾನೆ. ಈ ಸ್ಥಳವೇ ಇಂದಿನ ಉಜ್ಜಯಿನಿ ಗ್ರಾಮ.ತನ್ನ ನಂತರವೂ ವಿಶ್ವಕಲ್ಯಾಣ ಕರ‍್ಯ ನಿರಂತರವಾಗಿ ಸಾಗಬೇಕೆಂಬ ಏಕೈಕ ದೃಷ್ಟಿಯಿಂದ ತೆಲುಗು ಬಾಳಿನಿಂದ ಕರೆ ತಂದಿದ್ದ ತನ್ನ ಶಿಷ್ಯ ಸಿದ್ಧಯ್ಯನನ್ನು ಸದ್ಧರ್ಮ ಗದ್ದುಗೆಯಲ್ಲಿ ಕುಳ್ಳಿರಿಸಿ ತನ್ನ ಉತ್ತರಾಧಿಕಾರವನ್ನು ಕೊಟ್ಟು” ತರಳಬಾಳು” ಎಂದು ಆಶೀರ್ವದಿಸುತ್ತಾನೆ. ಅಂತೆಯೇ ತರಳಬಾಳು ಸಿದ್ದೇಶ್ವರನೆಂದು ಆಶೀರ್ವಾದಿಸಿದ ನಂತರ ಉಜ್ಜಯಿನಿ ಸದ್ದರ್ಮ ಸಿಂಹಾಸನದ ಪ್ರಥಮ ಅಧಿಪತಿಯಾಗುತ್ತಾನೆ. ಇದುವೇ ಶ್ರೀ ತರಳಬಾಳು ಜಗದ್ಗುರು ಪೀಠವು. ಕಾರಣಾಂತರಗಳಿAದ ಉಜ್ಜಯಿನಿಯನ್ನು ಬಿಟ್ಟ ನಂತರ ತರಳಬಾಳು ವಂಶದವರು ತುಮಕೂರು ಜಿಲ್ಲೆ ತಿಪಟೂರು ತಾ. ಪಾಲ್ಕುರಿಕೆಯಲ್ಲ್ಲಿ, ಚಿತ್ರದುರ್ಗ ಜಿಲ್ಲೆ ಸಿರಿಗೆರೆಯಲ್ಲಿ ತಮ್ಮ ಪರಂಪರೆಯನ್ನು ಬೆಳೆಸಿದರು. ಅಂದಿನಿAದ ಸಿರಿಗೆರೆ ಬೃಹನ್ಮಠ ಸಾಮಾಜಿಕ, ಶೈಕ್ಷಣಿಕ,ಸಾಹಿತ್ಯಿಕ,ಧಾರ್ಮಿಕ ಹಾಗೂ ಬಸವ ತತ್ವಗಳನ್ನು ತಿಳಿ ಹೇಳುವ ಮಹತ್ವದ ಕರ‍್ಯಕ್ರಮಗಳನ್ನು ಹಾಕಿಕೊಂಡು ಬರುತ್ತಿದೆ. ಈ ಉತ್ಸವದ ಮೂಲಕ ವಿಶ್ವಬಂಧು ಮರುಳಸಿದ್ಧರ ವಿಶ್ವಬಂಧುತ್ವ ಹಾಗೂ ಬಸವಾದಿ ”ಶಿವಶರಣರ” ಸಕಲ ಜೀವರಾಶಿಗಳಿಗೆ ಲೇಸನೇ ಬಯಸುವ” ಸರ್ವ ಸಮಾನತ್ವದ ಸಂದೇಶವು ಸಾರಲ್ಪಡುತ್ತದೆ.ಈ ಉತ್ಸವವನ್ನು ಅನೇಕ ಬುದ್ದಿಜೀವಿಗಳು ಸಂಚಾರಿ ವಿಶ್ವವಿದ್ಯಾಲಯವೆಂದು ಕರೆಯುತ್ತಾರೆ. ಏಕೆಂದರೆ ಪ್ರತಿ ವರ್ಷ ಒಂದೊAದು ಪ್ರಮುಖ ಸ್ಥಳವನ್ನಾರಿಸಿಕೊಂಡು ಉತ್ಸವದ ಸಂದರ್ಭದ ಒಂಭತ್ತು ದಿನಗಳ ಕಾಲ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ ಜನ ನಾಯಕರು, ವಿದ್ವಾಂಸರು, ಬುದ್ಧಿ ಜೀವಿಗಳು, ಸಾಹಿತಿಗಳ, ದೊಡ್ಡ ಸಮಾಗಮವೇ ನಡೆಸುತ್ತಾರೆ. ಸರ್ವಧರ್ಮ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಕಾರ್ಯಕ್ರಮಗಳಿಗೆ ಇಂದಿನ ಗುರು ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರೂ, ಸಾನಿಧ್ಯ ವಹಿಸಿ ಅದಕ್ಕೊಂದು ತಿರುಳು ತಂದುಕೊಟ್ಟಿದ್ದಾರೆ. ಸಮನ್ವಯ ವಿಚಾರಧಾರೆಯನ್ನು ಹರಿಸುವ ತರಳಬಾಳು ಹುಣ್ಣಿಮೆ ಜ್ಞಾನಾರ್ಜನೆಯನ್ನು ಹೆಚ್ಚಿಸಲಿ ಎಂದು ಆಶಿಸುತ್ತೇನೆ.:ಎಸ್. ಸಿದ್ದೇಶ್ ಕುರ್ಕಿ.ದಾವಣಗೆರೆ