ಸಂಚಾರಿ ಪೋಲಿಸ್ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ:ಮಾ.26:ನಗರದಲ್ಲಿನ ಸಂಚಾರಿ ಪೋಲಿಸ್ ವ್ಯವಸ್ಥೆಯು ಹದಗೆಟ್ಟು ಹೋಗಿದ್ದು, ಸುಧಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶುಕ್ರವಾರ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಗರ ಪೋಲಿಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸುಧಾರಿಸಲು ಸಂಚಾರಿ ಠಾಣೆಯ ಪೋಲಿಸರಿಗೆ ಮನವಿ ಸಲ್ಲಿಸಿದರೂ ಸಹ ಇಲ್ಲಿಯವರೆಗೆ ಯಾವುದೇ ಉಪಯೋಗ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೀದಿ ವ್ಯಾಪಾರಿಗಳು, ಇತರೆ ವ್ಯಾಪಾರಿಗಳು ಹಾಗೂ ವಾಹನ ಸವಾರರು ಕೋವಿಡ್-19 ನಿಯಮಗಳನ್ನು ಪಾಲಿಸುತ್ತಿಲ್ಲ. ಮಾಸ್ಕ್, ಸ್ಯಾನಿಟೈಜರ್ ಬಳಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸಮಸ್ಯೆ ಪರಿಹಾರ ಆಗುತ್ತಿಲ್ಲ ಎಂದು ಅವರು ಹೇಳಿದರು.
ನಗರದಲ್ಲಿ ಮುಖ್ಯವಾಗಿ ಸೂಪರ್ ಮಾರ್ಕೆಟ್‍ನ ಚಪ್ಪಲ್ ಬಜಾರ್, ಚೈನಾ ಮಾರ್ಕೆಟ್, ಬಾಂಡೇ ಬಜಾರ್, ಚೌಪಾಟಿ, ಸಂಗಮ್ ಚಿತ್ರಮಂದಿರ ರಸ್ತೆ, ಸಿಟಿ ಬಸ್ ನಿಲ್ದಾಣ, ಲಾಲ್‍ಗೇರಿ ಕ್ರಾಸ್, ಅನ್ನಪೂರ್ಣ ಕ್ರಾಸ್, ಸರಾಫ್ ಬಜಾರ್‍ದಿಂದ ಕೆಳಗಿನ ಜನತಾ ಬಜಾರ್, ಚಪ್ಪಲ್ ಬಜಾರ್, ಚೈನಾ ಮಾರ್ಕೆಟ್ ಎದುರುಗಡೆ ರಸ್ತೆಯ ಮೇಲೆ ನಟ್ಟ ನಡುವಿನಲ್ಲಿ ಹಣ್ಣುಗಳ ಬಂಡಿ ಹಾಗೂ ಇತರೇ ಬಟ್ಟೆ ಮುಂತಾದ ವ್ಯಾಪಾರಿಗಳು ತಳ್ಳುವ ಬಂಡಿಗಳನ್ನು ಇಟ್ಟು ವಹಿವಾಟು ಮಾಡುತ್ತಿದ್ದಾರೆ. ಇದರಿಂದ ಇತರೆ ವ್ಯಾಪಾರಿಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಾರ್ವಜನಿಕರು ವಿರೋಧಿಸದೇ ಇರುವುದನ್ನು ಬಂಡವಾಳ ಮಾಡಿಕೊಂಡು ವರ್ತಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಪಾದಾಚಾರಿ ಸ್ಥಳವನ್ನೂ ಸಹ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ವಾಹನಗಳನ್ನು ಸವಾರರು ಎಲ್ಲಿ ಬೇಕೆಂದಲ್ಲಿ ನಿಲ್ಲಿಸುತ್ತಿದ್ದು, ಜನಸಾಮಾನ್ಯರು ಪರದಾಡುವಂತೆ ಆಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅನ್ನಪೂರ್ಣ ಕ್ರಾಸ್ ಹತ್ತಿರ ಮೂರು ರಸ್ತೆಗಳು ಸಂಪರ್ಕ ಹೊಂದಿವೆ. ಇಲ್ಲಿ ದಟ್ಟನೆಯ ಸಂಚಾರ ಇದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಯಿಂದ ಬರುವ ವಾಹನಗಳಿಗೆ ಏಕಮುಖ ರಸ್ತೆ ಮಾಡಿ ಸಂಚಾರ ವ್ಯವಸ್ಥೆ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.
ಬೇಸಿಗೆ ಕಾಲದಲ್ಲಿ ಸೂರ್ಯನಗರಿಯಲ್ಲಿ ತಾಪಮಾನ ಹೆಚ್ಚಿನ ಪ್ರಮಾಣದಲ್ಲಿದ್ದು, ಸಂಚಾರಿ ಸಂಕೇತಗಳನ್ನು ವೃತ್ತಗಳಲ್ಲಿ ಅಳವಡಿಸಿದ್ದರಿಂದ ಸಂಕೇತಗಳಿಗಾಗಿ ಉರಿಬಿಸಿಲಿನಲ್ಲಿ ಸವಾರರು ನಿಲ್ಲಬೇಕಾಗುತ್ತದೆ. ಇದರಿಂದ ನಾನಾ ರೀತಿಯ ಸಮಸ್ಯೆಗಳು ಉಂಟಾಗಲಿವೆ. ಇದರಿಂದ ಮಹಿಳೆಯರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಮಧ್ಯಾಹ್ನ 1ರಿಂದ ಸಂಜೆ 5 ಗಂಟೆಯವರೆಗೆ ಸಂಚಾರಿ ಸಂಕೇತಗಳನ್ನು ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಸಂಸ್ಥಾಪಕ ಸಚಿನ್ ಎಸ್. ಫರತಾಬಾದ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುರೇಶ್ ಹನಗುಡಿ, ಅಂಬು ಮಸ್ಕಿ, ಅಕ್ಷಯ್, ರಾಹುಲ್ ಫರತಾಬಾದ್, ಅರ್ಜುನ್ ಸಿಂಗೆ, ಸುನೀಲ್ ಜಾಧವ್, ಪ್ರವೀಣ್ ಸಜ್ಜನ್, ಲಕ್ಷ್ಮೀಕಾಂತ್, ಉದಯಕುಮಾರ್, ರಾಹುಲ್ ಆಶ್ರಯ ಕಾಲೋನಿ ಮುಂತಾದವರು ಪಾಲ್ಗೊಂಡಿದ್ದರು.