ಸಂಚಾರಿ ನೇರ ಮಾರುಕಟ್ಟೆ ವ್ಯವಸ್ಥೆ ಉದ್ಘಾಟನೆ

ಧಾರವಾಡ, ಮೇ.29: ಧಾರವಾಡದ ಕೃಷಿ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಪದವೀಧರ ಅಧಿಕಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ರೈತರು ಮತ್ತು ಗ್ರಾಹಕರ ನಡುವಿನ ಸಂಚಾರಿ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು.
ಕಲಘಟಗಿ ತಾಲ್ಲೂಕಿನ ಗುಡ್ಡದ ಹುಲಿಕಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಹಾಗೂ ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ವಾಹನಕ್ಕೆ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ. ಕಿರಣಕುಮಾರ ಅವರು ಚಾಲನೆ ನೀಡಿದರು.
ರೈತರು ಶ್ರಮವಹಿಸಿ ಬೆಳೆಯುವ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಬೇಕೆಂದರೆ ನೇರ ಮಾರುಕಟ್ಟೆ ವ್ಯವಸ್ಥೆ ರೂಢಿಸಿಕೊಳ್ಳಬೇಕು. ಇದರಿಂದ ಗ್ರಾಹಕರಿಗೂ ಸುರಕ್ಷಿತ ಮತ್ತು ಆರೋಗ್ಯಯುಕ್ತ ಆಹಾರೋತ್ಪನ್ನಗಳು ನ್ಯಾಯಯುತ ಬೆಲೆಯಲ್ಲಿ ಸಿಗುತ್ತವೆ. ಇಂತಹ ವ್ಯವಸ್ಥೆಯಲ್ಲಿ ಪರಸ್ಪರ ವಿಶ್ವಾಸಾರ್ಹತೆಯಿಂದ ನಡೆದುಕೊಳ್ಳುವುದು ಎಲ್ಲ ಪಾಲುದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಾವಯವ ರೈತರ ಸಮೂಹ ರಚಿಸಿಕೊಂಡಿರುವ ಎಂ.ವಿ.ಪಾಟೀಲ ಇವರು ತಮ್ಮ ಉತ್ಪನ್ನಗಳು ಅಪ್ಪಟ ಸಾವಯವ ಪದ್ಧತಿಯಲ್ಲಿ ಬೆಳೆದಿದ್ದು, ಮಾರುಕಟ್ಟೆಗಿಂತ ಕಮ್ಮಿ ಬೆಲೆಯಲ್ಲಿ ನೀಡುವುದಾಗಿ ಹೇಳಿದರು. ಪ್ರತಿ ಮಂಗಳವಾರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 10:30 ಗಂಟೆಗೆ ಮತ್ತು ಮಧ್ಯಾಹ್ನ 2:30 ಗಂಟೆಗೆ ಕೃಷಿ ಇಲಾಖೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದರು. ಇತರೆ ಬಡಾವಣೆಗಳು ಮತ್ತು ಪ್ರದೇಶಗಳ ಜನರಿಗೆ ಸಾವಯವ ಉತ್ಪನ್ನಗಳನ್ನು ಖರೀದಿಸುವ ಇಚ್ಛೆ ಇದ್ದರೆ ಸಂಚಾಲಕ ಎಂ.ವಿ.ಪಾಟೀಲ ಅವರನ್ನು ಸಂಪರ್ಕಿಸಬಹುದಾಗಿದ್ದು ಅವರ ದೂರವಾಣಿ ಸಂಖ್ಯೆ: 997200958 ಇರುತ್ತದೆ.
ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ಎಸ್. ಡೊಳ್ಳಿ, ಸಾವಯವ ಕೃಷಿ ತಜ್ಞರಾದ ಡಾ. ಎಚ್.ಬಿ. ಬಬಲಾದ, ಉಪ ಕೃಷಿ ನಿರ್ದೇಶಕರಾದ ಜಯಶ್ರೀ ಹಿರೇಮಠ, ಸ್ಮಿತಾ ಆರ್, ಸಹಾಯಕ ಕೃಷಿ ನಿರ್ದೇಶಕರಾದ ಚನ್ನಪ್ಪ ಅಂಗಡಿ, ಆಶಾ ಮಿಕಲಿ, ಗೀತಾ ಕಡಪಟ್ಟಿ, ಗೀತಾ ಎಲ್, ಕೃಷಿ ಪದವಿಧರ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ವಿ.ವಿ.ವಿಠ್ಠಲರಾವ್ ಭಾಗವಹಿಸಿದ್ದರು. ಸ್ವದೇಶಿ ಆಂದೋಲನದ ಎಂ.ಡಿ.ಪಾಟೀಲ, ಕೃಷಿ ವಿಜ್ಞಾನಿಗಳಾದ ಡಾ. ಬಿ.ಎನ್.ಮೊಟಗಿ, ನಿಸರ್ಗ ಲಕ್ಷ್ಮೀ ಸಸಿ ದಾಸೋಹದ ಬಿ.ಎಸ್.ಕೊಣ್ಣೂರ, ಮಾವು ಬೆಳೆಗಾರ ಬಳಗದ ಜಿ.ಎಂ.ಹೊಸಮನಿ, ಯೋಗಪಟು ಟಕ್ಕಳಕಿ, ಶಿವರಾಜ ಹುನಗುಂದ, ಶಿವಾನಂದ ಕುಂಬಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ, ಪ್ರಗತಿಪರ ರೈತ ಈರಣ್ಣ ಬಾರಕೇರ, ರಾಜ್ಯ ಸರಕಾರಿ ನೌಕರರ ಸಂಘದ ರಾಜಶೇಖರ ಬಾಣದ, ಪ್ರಗತಿಪರ ರೈತ ಹಾಗೂ ಪಕ್ಷಿ ವೀಕ್ಷಕ ಆರ್ ಜಿ ತಿಮ್ಮಾಪುರ, ಕೃಷಿ ಅಧಿಕಾರಿಗಳಾದ ಮಾಲತೇಶ ಪುಟ್ಟಣ್ಣವರ, ಮಂಜುನಾಥ ಹೂಗಾರ, ಇನ್ನೂ ಅನೇಕ ಹಿರಿ-ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದು ಸಾವಯವ ಉತ್ಪನ್ನಗಳನ್ನು ಖರೀದಿಸಿದರು.