
ದಾವಣಗೆರೆ.ಏ.೨; ದೇಶದ ಒಳಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಾರ್ವಜನಿಕರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನಿವೃತ್ತ ಸಹಾಯಕ ಉಪನಿರೀಕ್ಷಕಹಾರೂನ್ ರಶೀದ್ ಮನವಿ ಮಾಡಿದರು.ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂದು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವೆ ಸಲ್ಲಿಸಲು ಸಾರ್ವಜನಿಕರೂ ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿದರು.ಪ್ರಸ್ತುತ ವಾತಾವರಣದಲ್ಲಿ ಸೈಬರ್ ಅಪರಾಧ, ಸಂಚಾರಿ ನಿಯಮಗಳ ಉಲ್ಲಂಘನೆ ಕಂಡು ಬರುತ್ತಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಲಾ ಕಾಲೇಜುಗಳಲ್ಲಿ ಸೈಬರ್ ಅಪರಾಧ ತಡೆಗಟ್ಟುವಿಕೆ ಮತ್ತು ಸಂಚಾರಿ ನಿಯಮಗಳ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ನಾನು ಸೇವೆಯಲ್ಲಿದ್ದಾಗ ಎಲ್ಲ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ನೀಡಿದ ಉತ್ತಮ ಸಹಕಾರದಿಂದ ತೃಪ್ತಿಕರವಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿದ್ದ ಆರೋಪಿಗೆ ವಾರೆಂಟ್ ನೀಡಲು ತೆರಳುವಾಗ ಜಿಲ್ಲಾ ರಕ್ಷಣಾಧಿಕಾರಿಗಳು ನೀಡಿದ ಸಲಹೆ, ಸೂಚನೆ, ಮಾರ್ಗದರ್ಶನ ತುಂಬಾ ಸಹಕಾರಿಯಾಯಿತು ಎಂದು ಸ್ಮರಿಸಿದರು.ಹಲವಾರು ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ನಮ್ಮನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ನಿತ್ಯ ವ್ಯಾಯಾಮ, ಯೋಗದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕುಟುಂಬದವರೊಂದಿಗೆ ಖುಷಿಯಿಂದ ಜೀವನ ನಡೆಸಬೇಕು ಎಂದರು.ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಕೆ. ತ್ಯಾಗರಾಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಇದ್ದರು. ದೇವರಾಜ್, ನಿರ್ಮಲ ನಿರೂಪಿಸಿದರು. ಎ.ಆರ್.ಬಸರಗಿ ವಂದಿಸಿದರು. ಸೇವೆಯಿಂದ ನಿವೃತ್ತರಾದ 15 ಸಿಬ್ಬಂದಿಗೆ ಗೌರವಿಸಲಾಯಿತು.