ಸಂಘ ಪರಿವಾರ ವಿರುದ್ಧ ರಾಹುಲ್ ಕಿಡಿ

ಹೋಶಿಯಾರ್ ಪುರ, ಜ. ೧೮-ಹಿಂದೂ ಧರ್ಮ ಸ್ವಯಂ ಅವಲೋಕನ ಮತ್ತು ಆತ್ಮವನ್ನು ಅರ್ಥಮಾಡಿಕೊಳ್ಳುವುದು ಎಂದು ಹೇಳಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ವಿನಮ್ರತೆಯ ಹಿಂದುತ್ವ ಮತ್ತು ಧರ್ಮವನ್ನು ಆರ್ ಎಸ್ ಎಸ್ ಮತ್ತು ಬಿಜೆಪಿ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಇದರಿಂದ ಧರ್ಮದ ಹೆಸರಲ್ಲಿ ಒಡೆದು ಆಳುತ್ತಿದೆ ಎಂದು ದೂರಿದ್ದಾರೆ.
“ಹಿಂದೂಗಳು ಆಕ್ರಮಣಕಾರಿಯಾಗಿರುವುದು ಸ್ವಾಭಾವಿಕ ಮತ್ತು ಮುಸ್ಲಿಮರು ಪರಮಾಧಿಕಾರದ ನಿರೂಪಣೆ ತ್ಯಜಿಸಬೇಕು ಎನ್ನುವ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಅವರು “ಹಿಂದೂ ಧರ್ಮ ಶಾಂತಿಪ್ರಿಯ ಧರ್ಮವಾಗಿದೆ, ಆದರೆ ಆರ್ ಎಸ್ ಎಸ್ ಹಿಂದೂ ‘ಧರ್ಮ’ದಲ್ಲಿ ಏನು ಬರೆಯಲಾಗಿದೆ, ಅದನ್ನು ಮಾಡುವುದಿಲ್ಲ, ಅವರು ಬೇರೇನಾದರೂ ಮಾಡುತ್ತಾರೆ, ಎಂದು ವಾಗ್ದಾಳಿ ನಡೆಸಿದರು.
ದುರುಪಯೋಗ:
ಬಿಜೆಪಿ ಮತ್ತು ಆರೆಸ್‌ಎಸ್ ಚುನಾವಣಾ ಆಯೋಗ ಮತ್ತು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಸೋದರ ಸಂಬಂಧಿ ಹಾಗೂ ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ಸಂಪರ್ಕಿಸುವ ಸಾಧ್ಯತೆಯ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅವರ ಸಿದ್ಧಾಂತಗಳು ಹೊಂದಿಕೆಯಾಗುವುದಿಲ್ಲ. ವರುಣ್ ಭಾರತ್ ಯಾತ್ರೆಗೆ ಕಾಲಿಟ್ಟರೆ ಅವರಿಗೆ ಸಮಸ್ಯೆಯಾಗಬಹುದು ಬಿಜೆಪಿ ಇದನ್ನು ಒಪ್ಪದಿರಬಹುದು ಎಂದು ಹೇಳಿದ್ದಾರೆ.
“ನಾನು ಎಂದಿಗೂ ಆರ್‌ಎಸ್‌ಎಸ್ ಕಚೇರಿಗೆ ಹೋಗಲಾರೆ. ನೀವು ನನ್ನ ಕತ್ತು ಸೀಳಿದರೂ ಹೋಗುವುದಿಲ್ಲ. ನನ್ನ ಕುಟುಂಬಕ್ಕೆ ಒಂದು ಸಿದ್ಧಾಂತವಿದೆ, ಅದಕ್ಕೆ ಚಿಂತನಾ ವ್ಯವಸ್ಥೆ ಇದೆ.” “ನಾನು ಪ್ರೀತಿಯಿಂದ ಭೇಟಿಯಾಗಬಹುದು, ಅಪ್ಪಿಕೊಳ್ಳಬಹುದು. ಆದರೆ ಆ ಸಿದ್ಧಾಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅದು ಅಸಾಧ್ಯ” ಎಂದು ಹೇಳಿದ್ದಾರೆ.
ಎಎಪಿ ವಿರುದ್ದ ವಾಗ್ದಾಳಿ”
ಪಂಜಾಬ್ ಮೂಲಕ ಪಾದಯಾತ್ರೆ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ, ರಾಜ್ಯದಲ್ಲಿ ಆಡಳಿತಾರೂಢ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಪಂಜಾಬ್ ಅನ್ನು ಪಂಜಾಬ್‌ನಿಂದ ಆಡಳಿತ ಮಾತ್ರ ನಡೆಸಬೇಕು, ದೆಹಲಿಯಿಂದ ಅಲ್ಲ ಎಂದಿದ್ದಾರೆ.