ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ

ಬೆಂಗಳೂರು.ಏ೨೫: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತೆ ಅನ್ನೋದು ಮುಖ್ಯವಲ್ಲ. ಮೊದಲು ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಕೆಲ ಚಿಂತಕರು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಅಸಮಾಧಾನ ಹೊರಹಾಕಿದ್ದಾರೆ. ಚುನಾವಣೆ ಹೊತ್ತಿನಲ್ಲೇ ಇಂದು ಎದ್ದೇಳು ಕರ್ನಾಟಕ ಸಂಘವು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಆಡಳಿತವನ್ನು ಟೀಕಿಸಿದ್ದಾರೆ.
ಈ ವೇಳೆ ಮಾತನಾಡಿದ ಸಾಹಿತಿ ದೇವನೂರ ಮಹಾದೇವ, ಮತದಾರರು ಹೆಚ್ಚು ಜಾಗೃತರಾಗಿದ್ದಾರೆ. ಇದುವರೆಗೆ ಇಷ್ಟು ಜಾಗೃತರಾಗಿರಲಿಲ್ಲ. ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಅಂತಾ ಕೇಳಿ ಕೇಳಿ ಕಿವಿ ತೂತು ಆಗಿದೆ. ಡಬಲ್ ಎಂಜಿನ್ ಸರ್ಕಾರ ಅಂತಾ ಹೇಳಿ ಅಭಿವೃದ್ಧಿಯ ಬುಡ ಅಲ್ಲಾಡಿಸುತ್ತಾರೆ ಎಂದು ಗುಡುಗಿದರು.
ಬಿಜೆಪಿ ಬಾಯಿ ಬಿಟ್ರೆ ಕಾಂಗ್ರೆಸ್ ಏನ್ ಮಾಡ್ತು ಅಂತಾರೆ. ಆದ್ರೆ ಸಾರ್ವಜನಿಕ ಆಸ್ತಿಗಳನ್ನು ಕಾಂಗ್ರೆಸ್ ರಕ್ಷಣೆ ಮಾಡಿದೆ. ಡಬಲ್ ಎಂಜಿನ್‌ನ ಒಂದು ಎಂಜಿನ್‌ನಲ್ಲಿ ಧರ್ಮದ ದ್ವೇಷ, ಇನ್ನೊಂದು ಎಂಜಿನ್‌ನಲ್ಲಿ ೪೦% ಕಮಿಷನ್ ಸೌಂಡ್ ಮಾಡ್ತಿದೆ ಅಷ್ಟೆ. ಬಿಜೆಪಿ ಸರ್ಕಾರವನ್ನು ಗುಜರಿಗೆ ಹಾಕಿ ಎಂದು ಕರೆ ನೀಡಿದರು.
ವರುಣಾದಲ್ಲಿ ಪ್ರಚಾರದ ವೇಳೆ ಸಂಸದ ಪ್ರತಾಪ್ ಸಿಂಹ ಅವರನ್ನು ಜನ ತರಾಟೆಗೆ ತೆಗೆದುಕೊಂಡ ವಿಷಯದ ಬಗ್ಗೆ ಮಾತನಾಡಿ, ಪ್ರತಾಪ್ ಸಿಂಹಗೆ ಮೊನ್ನೆ ವರುಣಾದಲ್ಲಿ ಜನ ಬೆವರಿಳಿಸಿದ್ರು. ಹಿಗ್ಗಾಮುಗ್ಗಾ ಜಾಡಿಸಿದ್ರು ಎಂದು ತಿಳಿಸಿದರು. ಭಾರತ್ ಜೋಡೊ ಯಾತ್ರೆಯ ಬಳಿಕ ಕಾಂಗ್ರೆಸ್ ಚೇತರಿಕೆ ಕಾಣುತ್ತಿದೆ. ಕಾಂಗ್ರೆಸ್ ಬಲವಾಗಿ ಇಲ್ಲದ ಕಡೆ ಜೆಡಿಎಸ್‌ನ್ನು ಗೆಲ್ಲಿಸೋಣ. ಬಿಜೆಪಿಯನ್ನು ಸೋಲಿಸೋಣ ಎಂದರು.