
ಅಫಜಲಪುರ:ಆ.15: ಸಮಾಜದ ಬದಲಾವಣೆ ಬಯಸುವ ಪತ್ರಕರ್ತರಿಗೆ ಮಾತ್ರ ಕಾರ್ಯನಿರತ ಪತ್ರಕರ್ತರ ಸಂಘವೇ ಹೊರತು ಕಾರ್ಯ ಮರೆತವರಿಗಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ತಿಳಿಸಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್‍ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಾಗತೀಕರಣದಿಂದಾಗಿ ಇಂದು ಮಾಧ್ಯಮ ಕ್ಷೇತ್ರ ಬಹು ವಿಸ್ತಾರವಾಗಿ ಹರಡಿಕೊಂಡಿದೆ.
ಪತ್ರಿಕೋದ್ಯಮ ಇಂದು ಆಳುವ ಪಕ್ಷದ ವಿರೋಧ ಪಕ್ಷದ ನಾಯಕನಂತೆ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ. ಮುಂದುವರಿದ ಅತ್ಯಾಧುನಿಕ ತಂತ್ರಜ್ಞಾನದ ಫಲವಾಗಿ ಇಂದು ಕ್ಷಣ ಮಾತ್ರದಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲಿನ ಸುದ್ದಿಗಳನ್ನು ತಿಳಿಯಬಹುದಾಗಿದೆ.
ಹೀಗಾಗಿ ಪತ್ರಕರ್ತರಾದವರು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಸಾಮರಸ್ಯ ಬೆಸೆಯುವ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು.
ಇತ್ತೀಚೆಗೆ ಬ್ರೇಕಿಂಗ್ ನ್ಯೂಸ್‍ಗಳ ಹಾವಳಿಯಿಂದ ಜನರ ಮನಸ್ಸು ತಲ್ಲಣಗೊಂಡಿವೆ. ಯಾವುದೇ ವರದಿ ಮಾಡಬೇಕಾದರೆ ಅದರ ವಿಶ್ವಾಸಾರ್ಹತೆ ಪರಿಶೀಲಿಸಬೇಕು. ಯಾರ ವೈಯಕ್ತಿಕ ಬಾಧ್ಯತೆಗೆ ಧಕ್ಕೆ ತರುವಂತಾಗಬಾರದು. ಒಂದು ಗ್ರಾಮೀಣ ಭಾಗದ ಅಥವಾ ತಾಲೂಕು ಮಟ್ಟದ ಸಮಸ್ಯಾತ್ಮಕ ವರದಿ ರಾಜ್ಯದ ಗಮನ ಸೆಳೆಯುವಂತಾಗಬೇಕು. ಇಂದು ಈ ಕ್ಷೇತ್ರದಲ್ಲಿ ಬದ್ಧತೆ ಕಾಯ್ದುಕೊಂಡು ಬರುವವರ ಸಂಖ್ಯೆ ಕಡಿಮೆಯಾಗಿದೆ.
ಕೇವಲ ಶೋಕಿ ಹಾಗೂ ಬ್ಲಾಕ್‍ಮೇಲ್ ಪತ್ರಕರ್ತರ ಹಾವಳಿ ಹೆಚ್ಚಾಗಿರುವುದರಿಂದ ಮೂಲ ಪತ್ರಕರ್ತರು ಮುಜುಗರ ಅನುಭವಿಸುವಂತಾಗಿದೆ. ಹೀಗಾಗಿ ಅಂಥವರನ್ನು ಆಯಾ ತಾಲೂಕು ಆಡಳಿತ ಮತ್ತು ಸರ್ಕಾರ ವಿಶೇಷ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು. ರಾಜಕಾರಣ ಅಥವಾ ಸಮಾಜ ಎಷ್ಟೇ ಕಲುಷಿತವಾದರೂ ಸಹ ಅದನ್ನು ಆರೋಗ್ಯಕರ ಹಾದಿಗೆ ತರುವಲ್ಲಿ ಒಬ್ಬ ಪತ್ರಕರ್ತನಿಂದ ಮಾತ್ರ ಸಾಧ್ಯ.
ಹೀಗಾಗಿ ಪತ್ರಕರ್ತರಾದವರು ಜನರಿಗೆ ಸಾಮಾಜಿಕ ನ್ಯಾಯ, ಬಡವರ ಪರ ನಿಂತು ಭ್ರಷ್ಟರ ಅಟ್ಟಹಾಸ ನಿಯಂತ್ರಿಸಲು ಮುಂದಾದಾಗ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕರೆ ನೀಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಶಾಸಕ ಎಂ.ವೈ ಪಾಟೀಲ್ ಮಾತನಾಡಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ತಾಲೂಕಿನ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಜಿ.ಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಮಾತನಾಡಿ ಪತ್ರಕರ್ತರು ಮನಸ್ಸು ಮಾಡಿದರೆ ಈ ದೇಶದಲ್ಲಿ ಎಂತಹ ಬದಲಾವಣೆಯನ್ನಾದರೂ ತರಬಹುದು. ಹೀಗಾಗಿ ಸಾಮಾಜಿಕ ಸೇವೆಯಲ್ಲಿರುವ ಪತ್ರಕರ್ತರ ಸೇವೆ ಇಂದಿನ ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀಮಂತ ಬಿರಾದಾರ್, ದತ್ತು ಕೊಳ್ಳೂರ, ಶಿವಾನಂದ ಚಿಂಚೋಳಿ, ಶಿವಶರಣ ಕಲ್ಲೂರಕರ್, ಬನಶಂಕರಿ ದೇಶಪಾಂಡೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅದರಂತೆ ಇತ್ತೀಚೆಗೆ ಜಿಲ್ಲಾಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿಶೇಷ ಸನ್ಮಾನಕ್ಕೆ ಭಾಜನರಾದ ಸಂಘದ ಗೌರವಾಧ್ಯಕ್ಷ ಶಕೀಲ್ ಚೌಧರಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಕಲ್ಲೂರ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ್, ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ, ಜಿಲ್ಲಾ ಮಟ್ಟದ ಹಿರಿಯ ಪತ್ರಕರ್ತರಾದ ಸಂಗಮನಾಥ ರೇವತಗಾಂವ್, ಶಿವರಂಜನ್ ಸತ್ಯಂಪೇಟೆ, ದೇವೇಂದ್ರಪ್ಪ ಕಪನೂರ್, ಹಣಮಂತರಾವ ಬೈರಾಮಡಗಿ, ಪುರಸಭೆ ಸದಸ್ಯ ಚಂದು ದೇಸಾಯಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.