ಸಂಘವನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಒತ್ತಾಯ

ಬಳ್ಳಾರಿ, ಏ.12: ಸಹಕಾರ ಇಲಾಖೆಯ ಸರ್ಕಾರದ ಆಧೀನ ಕಾರ್ಯದರ್ಶಿ (3)(ಪ್ರ) ಅವರ ಆದೇಶದಂತೆ ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘವನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ವಾಲ್ಮೀಕಿ ಸಮುದಾಯದ ಮುಖಂಡ ಜಿ.ರುದ್ರಪ್ಪ ಅವರು, ಸಹಕಾರ ಇಲಾಖೆಯ ಉಪನಿಬಂಧಕರನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಸಂಘವು ಶೈಕ್ಷಣಿಕ ಚಟುವಟಿಕೆಯಲ್ಲಿ ನಿರೀಕ್ಷಿತ ಕಾರ್ಯ ಮಾಡದೇ ಇದ್ದುದರಿಂದ ಹಾಗೂ ಸಂಘದ ನವೀಕರಣವನ್ನು ಸಮಯಕ್ಕೆ ಸರಿಯಾಗಿ ಮಾಡದೇ ಮೂರು ತಿಂಗಳ ಹಿಂದೆ 31-12-2020ಗೆ ದಂಡವನ್ನು 7 ವರ್ಷಗಳಿಗೆ ಪಾವತಿಸಿದ್ದಾರೆ. ಈ ರೀತಿ ನಿಷ್ಕ್ರಿಯಗೊಂಡ ಸಂಘದ ಕಾರ್ಯಕಾರಿ ಸಮಿತಿಗೆ ಯಾವುದೇ ಅಧಿಕಾರವಿಲ್ಲವೆಂದು ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಂಘಕ್ಕೆ 6 ತಿಂಗಳ ಅವಧಿಗೆ ಆಡಳಿತ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದ್ದರು ಎಂದು ತಿಳಿಸಿದರು.
ನಂತರ ಸಂಘದ ವತಿಯಿಂದ ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು ನಡೆಸುತ್ತಿರುವುದರಿಂದ ಹಾಗೂ ಆಡಳಿತಾತ್ಮಕ ದೃಷ್ಠಿಯಿಂದ ಸಂಘಕ್ಕೆ ನೇಮಿಸಿದ್ದ ಆಡಳಿತಾಧಿಕಾರಿ ಆದೇಶವನ್ನು ಹಿಂಪಡೆದು ಮುಂದಿನ ಆದೇಶದವರೆಗೂ ಯಥಾಸ್ಥಿತಿಯನ್ನು ಕಾಪಾಡುವಂತೆ ಆದೇಶಿಸಿದ್ದಾರೆ ಎಂದು ಹೇಳಿದರು.
ಉಲ್ಲೇಖ ಒಂದರ ಪ್ರಕಾರ ಸಹಕಾರ ಸಂಘಗಳ ಉಪನಿಬಂಧಕರು ಸಂಘದ ಬೈಲ ಪ್ರಕಾರ ಹೊಸ ಕಾರ್ಯಕಾರಿ ಸಮಿತಿ ಆಯ್ಕೆಗೊಳ್ಳುವವರೆಗೆ ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ಅಥವಾ ಮುಂದುವರೆಸಲು ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.
ಆದರೂ ಏ.18ರಂದು ಸಂಘದ ಹಾಲಿ ಅಧ್ಯಕ್ಷರು, ಸರ್ವಸದಸ್ಯರ ಸಭೆಯನ್ನು ಕರೆದಿದ್ದಾರೆ. ಈ ಸಭೆಯನ್ನು ಕೂಡಲೇ ತಡೆಗಟ್ಟಿ ಸಹಕಾರ ಇಲಾಖೆಯ ಸರ್ಕಾರದ ಅಧೀನಕಾರ್ಯದರ್ಶಿ (3) ಹೊರಡಿಸಿದ ಆದೇಶ ತಿಳಿಸಿರುವಂತೆ ಯಥಾಸ್ಥಿತಿಯನ್ನು ಸಹಕಾರ ಇಲಾಖೆಯ ಉಪನಿಬಂಧಕರು ಕಾಪಾಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗೋವಿಂದಪ್ಪ, ಶರಣಪ್ಪ, ತಿಮ್ಮಪ್ಪ, ನೀಲಪ್ಪ, ಮತ್ತಿತರರು ಉಪಸ್ಥಿತರಿದ್ದರು.